ಡೈಲಿ ವಾರ್ತೆ: ಮಾ./03/2026

ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಅಗ್ರಹಿಸಿ ರಮಾನಾಥ್ ರೈ ನೇತೃತ್ವದಲ್ಲಿ ಧರಣಿ: ಹೋರಾಟ ತೀವ್ರಗೊಳ್ಳುವ ಎಚ್ಚರಿಕೆ

ಬಂಟ್ವಾಳ: ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ವತಿಯಿಂದ ಮಂಗಳವಾರ ಟೋಲ್ ಪ್ಲಾಜಾ ಎದುರು ಸಾಮೂಹಿಕ ಧರಣಿ ನಡೆಯಿತು.

ಧರಣಿ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ 23 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳಿಗೆ ವಿರುದ್ಧವಾಗಿ ಸುಂಕ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿದರು. ಕನಿಷ್ಠ 60 ಕಿ.ಮೀ ಅಂತರ ನಿಯಮ ಉಲ್ಲಂಘಿಸಿ ಸುತ್ತಮುತ್ತ ಹಲವು ಟೋಲ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರ ಮೇಲೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.

ಹೆದ್ದಾರಿಯಲ್ಲಿ ಸಮರ್ಪಕ ಸರ್ವೀಸ್ ರಸ್ತೆ, ಬೈಪಾಸ್, ಮೇಲ್ಸೇತುವೆಗಳಿಲ್ಲದಿರುವ ನಡುವೆಯೂ ದೀರ್ಘಕಾಲ ಸುಂಕ ವಸೂಲಿ ಮುಂದುವರಿಸಿರುವುದು ಸಮರ್ಥನೀಯವಲ್ಲ. ತಕ್ಷಣವೇ ಟೋಲ್ ಗೇಟ್ ಮುಚ್ಚದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಧರಣಿಯ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. ವಿವಿಧ ಸಂಘಟನೆಗಳ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.