ಡೈಲಿ ವಾರ್ತೆ: ಮಾ./04/2026

ಬೆಂಗಳೂರಿನಲ್ಲಿ ‘ಹೈಪ್ರೊಫೈಲ್’ ಮೊಬೈಲ್ ಕಳ್ಳರ ಜಾಲ ಪತ್ತೆ: ವಿಮಾನದಲ್ಲಿ ಬಂದು ಐ-ಫೋನ್ ಎಗರಿಸುತ್ತಿದ್ದ ದೆಹಲಿ ಮೂಲದ ಆರೋಪಿಗಳ ಬಂಧನ

​ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಚ್ಚರಿಯ ಕಳ್ಳತನದ ಪ್ರಕರಣವೊಂದನ್ನು ಭೇದಿಸುವಲ್ಲಿ ವೈಟ್‌ಫೀಲ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇವಲ ಐ-ಫೋನ್‌ಗಳನ್ನು ಗುರಿಯಾಗಿಸಿಕೊಂಡು, ವಿಮಾನದ ಮೂಲಕ ನಗರಕ್ಕೆ ಬಂದು ಕಳ್ಳತನ ಮಾಡುತ್ತಿದ್ದ ದೆಹಲಿ ಮೂಲದ ಇಬ್ಬರು ಅಂತರ್ರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯಲ್ಲಿ ಕಾರ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಜಯಚಂದ್ ಮತ್ತು ತರುಣ್ ಬಂಧಿತ ಆರೋಪಿಗಳು. ಇವರು ಕೇವಲ ಮೊಬೈಲ್ ಕಳ್ಳತನ ಮಾಡಲೆಂದೇ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದರು. ಅಲ್ಲಿಂದ ಕ್ಯಾಬ್ ಬಾಡಿಗೆಗೆ ಪಡೆದು ನಗರದಾದ್ಯಂತ ಸಂಚರಿಸುತ್ತಿದ್ದರು.

ಇವರಿಗೆ ​ಶ್ರೀಮಂತರೇ ಟಾರ್ಗೆಟ್: ಈ ಕಳ್ಳರು ಸಾಮಾನ್ಯ ಮೊಬೈಲ್‌ಗಳತ್ತ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ಕೇವಲ ದುಬಾರಿ ಬೆಲೆಯ ಐ-ಫೋನ್‌ಗಳನ್ನು ಹೊಂದಿರುವವರನ್ನೇ ಗುರಿಯಾಗಿಸಿಕೊಳ್ಳುತ್ತಿದ್ದರು.
​ ನಗರದ ಐಷಾರಾಮಿ ಹೋಟೆಲ್‌ಗಳಲ್ಲಿ ನಡೆಯುವ ಪಾರ್ಟಿಗಳು ಹಾಗೂ ದೇವನಹಳ್ಳಿ ಸುತ್ತಮುತ್ತ ನಡೆಯುವ ದೊಡ್ಡ ಮಟ್ಟದ ಸಂಗೀತ ಕಾರ್ಯಕ್ರಮಗಳಲ್ಲಿ ಸೋಗಿನಂತೆ ಭಾಗವಹಿಸಿ ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಅಪಹರಿಸುತ್ತಿದ್ದರು.
​ ಕೇವಲ ಪಾರ್ಟಿಗಳಲ್ಲದೆ, ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಸಿ ಸಹ-ಪ್ರಯಾಣಿಕರ ಬೆಲೆಬಾಳುವ ಫೋನ್‌ಗಳನ್ನು ಎಗರಿಸುತ್ತಿದ್ದರು.

​ಪತ್ತೆಯಾದದ್ದು ಹೇಗೆ?
ಚನ್ನರಾಯಪಟ್ಟಣದಲ್ಲಿ ಮೊಬೈಲ್ ಕಳವು ಮಾಡಿ ವೈಟ್‌ಫೀಲ್ಡ್ ಕಡೆಗೆ ಬರುವಾಗ ಮತ್ತೊಂದು ಐ-ಫೋನ್ ಕಳ್ಳತನ ಮಾಡಿದ್ದರು. ತಾಂತ್ರಿಕ ಕಾರ್ಯಾಚರಣೆ ನಡೆಸಿದ ವೈಟ್‌ಫೀಲ್ಡ್ ಪೊಲೀಸರು ಆರೋಪಿಗಳು ತಂಗಿದ್ದ ಲಾಡ್ಜ್ ಮೇಲೆ ದಾಳಿ ನಡೆಸಿದಾಗ ಈ “ಹೈಟೆಕ್” ಕಳ್ಳತನದ ರಹಸ್ಯ ಬಯಲಾಗಿದೆ.

ಬಂಧಿತರಿಂದ ಸುಮಾರು ₹10 ಲಕ್ಷ ಮೌಲ್ಯದ 14 ಐ-ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕದ್ದ ಮೊಬೈಲ್‌ಗಳನ್ನು ಲಾಡ್ಜ್‌ನಲ್ಲಿ ಬಚ್ಚಿಟ್ಟು, ನಂತರ ದೆಹಲಿಗೆ ಪರಾರಿಯಾಗುವ ಸಂಚು ಇವರದ್ದಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.