ಡೈಲಿವಾರ್ತೆ:12/ಮಾರ್ಚ್/2026

ಉಡುಪಿ| ಸ್ಕೂಟಿಗೆ ಕಾರು ಡಿಕ್ಕಿ: ಸಹಾಯ ಬದಲು ದೌರ್ಜನ್ಯ! ಸವಾರ ಹಾಗೂ ಮಹಿಳೆಯ ಮೇಲೆ ಕಾರು ಚಾಲಕನ ಹಲ್ಲೆ

ಉಡುಪಿ: ಸ್ಕೂಟಿಗೆ ಕಾರು ಡಿಕ್ಕಿ ಹೊಡೆದ ಬಳಿಕ ಗಾಯಾಳುಗಳಿಗೆ ಸಹಾಯ ಮಾಡುವ ಬದಲು ಕಾರು ಚಾಲಕನೊಬ್ಬ ಸ್ಕೂಟಿ ಸವಾರ ಹಾಗೂ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿದ ಘಟನೆ ಉಡುಪಿಯ ಚಿತ್ತರಂಜನ್ ಸರ್ಕಲ್‌ಗೆ ತೆರಳುವ ರಸ್ತೆಯಲ್ಲಿ ನಡೆದಿದೆ.

ವೇಗವಾಗಿ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಮತ್ತು ಅವರ ಪತ್ನಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಆದರೆ ಅಪಘಾತಕ್ಕೀಡಾದವರಿಗೆ ಸಹಾಯ ಮಾಡುವ ಬದಲು ಕಾರು ಚಾಲಕ ಏಕಾಏಕಿ ಆಕ್ರೋಶಗೊಂಡು ಸ್ಕೂಟಿ ಚಲಾಯಿಸುತ್ತಿದ್ದ ವ್ಯಕ್ತಿಗೆ ಹಲ್ಲೆ ನಡೆಸಿದ್ದಾನೆ.

ಈ ಸಂದರ್ಭವನ್ನು ವಿಡಿಯೋದಲ್ಲಿ ಸೆರೆಹಿಡಿಯಲು ಸವಾರನ ಪತ್ನಿ ಮುಂದಾದಾಗ, ಕಾರು ಚಾಲಕ ಮಹಿಳೆಯ ಮೇಲೂ ಹಲ್ಲೆ ನಡೆಸಿ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ.
ಆದರೆ ಅಪಘಾತಕ್ಕೀಡಾದ ಮಹಿಳೆ ಕಾರಿಗೆ ಅಡ್ಡ ನಿಂತು ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಕಾರು ಚಾಲಕನಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ವೇಳೆ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಕಾರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಕಾರು ಚಾಲಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಈ ಘಟನೆಯ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾರು ಚಾಲಕನ ಅಸಭ್ಯ ವರ್ತನೆ ಖಂಡಿಸಿ ಅವನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.