


ಡೈಲಿವಾರ್ತೆ:18/ಆಗಸ್ಟ್ /2026

ತದಡಿಯಲ್ಲಿ ಮೀನುಗಾರಿಕೆ ತೆರಳಿದ್ದ ಬೋಟ್ ಮುಳುಗಡೆ – ನಾಲ್ವರು ಮೀನುಗಾರರ ರಕ್ಷಣೆ

ಕುಮಟಾ: ಮೀನುಗಾರಿಕೆ ತೆರಳಿದ್ದ ಬೋಟ್ ಹೂಳು ಮತ್ತು ಅಲೆಗಳ ಅಬ್ಬರಕ್ಕೆ ಸಮುದ್ರದ ಅಳವೆಯಲ್ಲಿ ಮುಳಗಿದ್ದು ಬೋಟಿನಲ್ಲಿದ್ದ ನಾಲ್ವರು ಮೀನುಗಾರರನ್ನ ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಆ. 18 ರಂದು ಮಂಗಳವಾರ ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಭಾಗದ ತದಡಿ ಬಂದರಿನಲ್ಲಿ ನಡೆದಿದೆ.
ಸುರೇಂದ್ರ ಹರಿಕಂತ್ರ ಎಂಬವರ ಮಾಲಕತ್ವದ ಲಕ್ಷ್ಮೀಕೃಪ ಹೆಸರಿನ ಮೀನುಗಾರಿಕೆ ಬೋಟ್ ಎಂದು ತಿಳಿದು ಬಂದಿದೆ.
ಮಂಗಳವಾರ ಮುಂಜಾನೆ ಗೋಕರ್ಣದ ತದಡಿಯ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಆದರೇ ಸ್ವಲ್ಪ ದೂರದಲ್ಲೇ ಹೂಳು ತುಂಬಿದ ಅಳವೆಯಲ್ಲಿ ಸಿಲುಕಿಕೊಂಡಿದ್ದು, ಅಲೆಗಳ ಹೊಡೆತಕ್ಕೆ ತಳಭಾಗದಲ್ಲಿ ಹಾನಿಯಾಗಿ ಬೋಟ್ ಮುಳುಗಿದೆ. ತಕ್ಷಣ ಸ್ಥಳೀಯ ಮೀನುಗಾರರು ಬೋಟಿನಲ್ಲಿದ್ದ ನಾಲ್ವರು ಮೀನುಗಾರರನ್ನ ರಕ್ಷಿಸಿದ್ದಾರೆ. ಬೋಟ್ ಮುಳುಗಡೆಯಿಂದ ಸುಮಾರು 20 ಲಕ್ಷ ರೂ. ಮೌಲ್ಯ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
ಎರಡು ದಿನದ ಹಿಂದೆ ಇದೇ ಜಾಗದಲ್ಲಿ ಶ್ರೀದೇವಿ ಹೆಸರಿನ ಬೋಟ್ ಮುಳುಗಡೆಯಾಗಿತ್ತು. ತದಡಿಯ ಅಳಿವೆಯ ಹೂಳಿನಿಂದ ಪದೇಪದೇ ಇದೇ ಜಾಗದಲ್ಲಿ ಬೋಟುಗಳು ಮುಳುಗುತಿದ್ದು, ಒಂದೇ ವಾರದಲ್ಲಿ ಎರಡು ಬೋಟ್ ಮುಳುಗಡೆಯಾಗಿದೆ.