ಡೈಲಿವಾರ್ತೆ:18/ಆಗಸ್ಟ್ /2026

ಚಿಕ್ಕಬಾಣಾವರ: ತಂದೆ,ಮಗು ಸಾವು ಪ್ರಕರಣಕ್ಕೆ ರೋಚಕ ತಿರುವು – ಪ್ರಿಯಕರನ ಜೊತೆ ಸೇರಿ ಪತಿ-ಮಗನ ಕೊಲೆ – ಪತ್ನಿ ಬಂಧನ

ಬೆಂಗಳೂರು: ಚಿಕ್ಕಬಾಣಾವರದಲ್ಲಿ ಪತಿ ಹಾಗೂ 5 ವರ್ಷದ ಮಗುವಿನ ಸಂಶಯಾಸ್ಪದ ಸಾವಿನ ಪ್ರಕರಣ ಇದು ಭೀಕರ ಕೊಲೆ ಪ್ರಕರಣವಾಗಿ ತಿರುವು ಪಡೆದಿದ್ದು ಪೊಲೀಸರು ಪತ್ನಿ ಹರಿಣಿಯನ್ನು ಬಂಧಿಸಿದ್ದಾರೆ. ಅಲ್ಲದೆ ಪೊಲೀಸ್ ತನಿಖೆ ವೇಳೆ ಪ್ರಿಯಕರ ವಿನಯ್ ಯೊಂದಿಗೆ ಸೇರಿ ಪತಿ ಹಾಗೂ ಮಗನನ್ನು ತಾನೇ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.

ಘಟನೆ ವಿವರ:
ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಸಮೀಪದ ಗುಡ್ಡೆ ಬಸವಪುರದಲ್ಲಿ ಅಭಿನಂದನ್ (33) ಹಾಗೂ ಆತನ 5 ವರ್ಷದ ಪುತ್ರ ಯದುವೀ‌ರ್ ಸೋಮವಾರ ಬೆಳಗ್ಗೆ ಅವರ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಪತ್ತೆಯಾಗಿತ್ತು.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೃತನ ಪತ್ನಿ ಹರಿಣಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ವಿಚಾರವನ್ನು ಒಪ್ಪಿಕೊಂಡಿದ್ದಾಳೆ.

ಆಗಸ್ಟ್ 16ರ ಭಾನುವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಹರಿಣಿ ತನ್ನ ಪ್ರಿಯಕರ ವಿನಯ್‌ನನ್ನು ಮನೆಗೆ ಕರೆಸಿಕೊಂಡಿದ್ದಳು. ಇದೇ ವೇಳೆ ಹರಿಣಿ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದು ಬಳಿಕ ಇಬ್ಬರೂ ಸೇರಿ ಮನೆಯಲ್ಲಿದ್ದ ಅಡಿಗೆ ಸೌಟ್‌ನಿಂದ ಅಭಿನಂದನ್ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಈ ವೇಳೆ ಪುತ್ರ ಯದುವೀರ್‌ ಘಟನೆಯನ್ನು ನೋಡಿದ್ದು, ಮುಂದೆ ತೊಂದರೆಯಾಗಬಹುದು ಎಂದು ಭಾವಿಸಿದ ಹರಿಣಿ ಹಾಗೂ ವಿನಯ್, ಮಗುವನ್ನು ತಲೆದಿಂಬಿನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾಳೆ.

ಬಳಿಕ ಪ್ರಕರಣವನ್ನು ಬೇರೆ ರೀತಿಯಲ್ಲಿ ಬಿಂಬಿಸಲು ಆರೋಪಿಗಳು ಮನೆಯೊಳಗೆ ರಕ್ತದ ಕಲೆಗಳಿದ್ದುದರಿಂದ ಸಾಕ್ಷ್ಯ ನಾಶಪಡಿಸಲು ಹರಿಣಿ ಎಲ್ಲ ರಕ್ತದ ಕಲೆಗಳನ್ನು ತೊಳೆದಿದ್ದಾಳೆ. ಅಭಿನಂದನ್ ಮೈಮೇಲಿದ್ದ ರಕ್ತದ ಕಲೆಗಳು ಬಿದ್ದಿದ್ದ ಬಟ್ಟೆಗಳನ್ನು ಬದಲಿಸಿ, ಅವುಗಳನ್ನು ರಾತ್ರೋರಾತ್ರಿ ತೊಳೆದು ಹಾಕಿದ್ದಳು. ನಂತರ ಮಗುವನ್ನು ಪತಿಯ ಮೇಲೆ ಮಲಗಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾನೆ ಎಂಬಂತೆ ಬಿಂಬಿಸಲು ಯತ್ನಿಸಿದ್ದಳು. ಸೋಮವಾರ ಬೆಳಗ್ಗೆ ಪೊಲೀಸರು ಸ್ಥಳಕ್ಕೆ ತೆರಳಿದಾಗ, ತಂದೆ, ಮಗು ಮಾತ್ರ ಬೆಡ್ ರೂಮಿನಲ್ಲಿ ಸಾವನ್ನಪ್ಪಿದ್ದು ಕಂಡುಬಂದಿತ್ತು.

ಆರೋಪಿಗಳು ಮೊದಲೇ ಯೋಜಿಸಿದಂತೆ, ಕೊಲೆ ನಡೆಸಿದ ಬಳಿಕ ವಿನಯ್ ಅಲ್ಲಿಂದ ಪರಾರಿಯಾಗಿದ್ದ. ಪತ್ನಿ ಹರಿಣಿ ಮಾತ್ರ ತಂದೆಯೇ ಮಗನನ್ನು ಕೊಂದು ಸಾವನ್ನಪ್ಪಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಳು.

ಹರಿಣಿ ಮೂರು ತಿಂಗಳ ಹಿಂದೆ ಪ್ರಿಯಕರನ ಜೊತೆಗೆ ಪರಾರಿಯಾಗಿದ್ದಳು. ಆನಂತರ, ಸಂಬಂಧಿಕರು ಸೇರಿ ಪತಿ – ಪತ್ನಿಯನ್ನು ಸಮಾಧಾನಪಡಿಸಿ ಮತ್ತೆ ಒಂದು ಮಾಡಿದ್ದರು. ಗಂಡ ಅಭಿನಂದನ್ ಪತ್ನಿಯನ್ನು ಸ್ವೀಕರಿಸಿ ಆಕೆಯೊಂದಿಗೆ ಮನೆಯಲ್ಲೇ ಜೀವನ ನಡೆಸುತ್ತಿದ್ದರು. ಆದರೆ ಹಳೆಯ ಸಂಬಂಧ ಮುಂದುವರಿದಿದ್ದು ಪ್ರಿಯಕರ ವಿನಯ್ ಆಕೆಯೊಂದಿಗೆ ಸೇರಿಕೊಂಡು ಕಿರಾತಕ ಬುದ್ಧಿ ತೋರಿಸಿದ್ದಾನೆ. ಗಂಡ ಮತ್ತು ಮಗುವನ್ನು ಕೊಲ್ಲಿಸಿ ತಾವು ಸುಖವಾಗಿರಬಹುದು ಎಂದು ಪ್ಲಾನ್ ಹಾಕಿದ್ದು ಈಗ ಜೈಲು ಕಂಬಿ ಎಣಿಸುವಂತೆ ಮಾಡಿದೆ.