ಡೈಲಿವಾರ್ತೆ:27/ಮಾರ್ಚ್/2026

ಉಡುಪಿ: ಸಮಾಜಘಾತಕ ಕೃತ್ಯಗಳಿಗೆ ಬ್ರೇಕ್ – ಇಬ್ಬರು ರೌಡಿ ಶೀಟರ್‌ಗಳಿಗೆ ಜಿಲ್ಲೆಯಿಂದ ಗಡಿಪಾರು

​ಉಡುಪಿ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದ ಇಬ್ಬರು ಕುಖ್ಯಾತ ರೌಡಿ ಶೀಟರ್‌ಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.


​ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಮ್ಮದ್ ನೌಫಿಲ್ ಮತ್ತು ಸುಹಾನ್ ಪೂಜಾರಿ ಎಂಬುವವರ ವಿರುದ್ಧ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಮಾರ್ಚ್ 26ರಂದು ವಿಶೇಷ ಕಾರ್ಯಾಂಗ ದಂಡಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಂಟಿಯಾಗಿ ಈ ಗಡಿಪಾರು ಆದೇಶವನ್ನು ಜಾರಿಗೊಳಿಸಿದ್ದಾರೆ.

​ಮಹಮ್ಮದ್ ನೌಫಿಲ್ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಸೂರ್ಯಗುಡ್ಡೆ, ಕಳತ್ತೂರು ಗ್ರಾಮದ ನಿವಾಸಿಯಾಗಿದ್ದು ಇವನ ವಿರುದ್ಧ ಈಗಾಗಲೇ ಐದು ಗಂಭೀರ ಪ್ರಕರಣಗಳು ದಾಖಲಾಗಿದ್ದು, ಶಿರ್ವ ಠಾಣೆಯಲ್ಲಿ ಈತನ ಹೆಸರಿನಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ಇವನನ್ನು ಇದೀಗ ಹಾವೇರಿ ಜಿಲ್ಲೆಯ ಶಿಗ್ಗಾಂವ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.

​ಸುಹಾನ್ ಪೂಜಾರಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ನಿವಾಸಿಯಾಗಿದ್ದು ಈತನ ವಿರುದ್ಧ ನಾಲ್ಕು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈತನನ್ನು ಯಾದಗಿರಿ ಜಿಲ್ಲೆಯ ಯಾದಗಿರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸ್ಥಳಾಂತರಿಸಿ ಆದೇಶಿಸಲಾಗಿದೆ.

​”ಜಿಲ್ಲೆಯಲ್ಲಿ ಶಾಂತಿ ಮತ್ತು ಸುಭದ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಸಮಾಜಘಾತಕ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಇಂತಹ ಕಠಿಣ ಕ್ರಮಗಳನ್ನು ಮುಂದುವರಿಸಲಾಗುವುದು” ಎಂದು ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.