

ಡೈಲಿವಾರ್ತೆ:01/ಏಪ್ರಿಲ್ /2026


ಉಡುಪಿ: ವರದಕ್ಷಿಣೆಗಾಗಿ ಪತ್ನಿಗೆ ಕ್ರೂರ ಹಿಂಸೆ – ಕಾಪು ಮಲ್ಲಾರಿನ ಉಮ್ಮರ್ ಫರೀದ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

ಉಡುಪಿ: ಮದುವೆ ವೇಳೆ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ಪಡೆದಿದ್ದರೂ, ಹೆಚ್ಚುವರಿ ವರದಕ್ಷಿಣೆಗಾಗಿ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಘಟನೆ ಕಾಪು ತಾಲೂಕಿನ ಮಲ್ಲಾರು ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧ ಕಾಪು ಕೊಪ್ಪಲಂಗಡಿಯ ಸಹಾರ ಗಪೂರ್ (32) ನೀಡಿದ ದೂರಿನಂತೆ ಆಕೆಯ ಪತಿ ಹಾಗೂ ಮನೆಯವರ ವಿರುದ್ಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕಾಪು ಮಲ್ಲಾರು ಗ್ರಾಮದ ಉಮ್ಮರ್ ಫರೀದ್ ಮತ್ತು ಸಹಾರ ಗಪೂರ್ ಅವರ ವಿವಾಹವು 2018ರ ಜನವರಿ 6ರಂದು ನಡೆದಿತ್ತು. ಮದುವೆ ಸಂದರ್ಭದಲ್ಲಿ ಆರೋಪಿಗಳು 15 ಲಕ್ಷ ರೂ. ನಗದು ಹಾಗೂ 400 ಗ್ರಾಂ ಚಿನ್ನಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ ಪೀಡಿತೆಯ ಮನೆಯವರು 10 ಲಕ್ಷ ರೂ. ನಗದು ಮತ್ತು 300 ಗ್ರಾಂ ಚಿನ್ನವನ್ನು ನೀಡಿದ್ದರು.
ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಉಮ್ಮರ್ ಫರೀದ್, “ನಿನ್ನ ತಂದೆ ಮನೆಯವರು ಬಾಕಿ ಹಣ ಮತ್ತು ಚಿನ್ನವನ್ನು ಕೊಟ್ಟಿಲ್ಲ” ಎಂದು ಕಿರಿಕಿರಿ ಆರಂಭಿಸಿದ್ದನು. ಪತ್ನಿಗೆ ಕೆನ್ನೆಗೆ ಹೊಡೆಯುವುದು, ಕಾಲಿನಿಂದ ತುಳಿಯುವುದು ಹಾಗೂ ಉಗುರಿನಿಂದ ಪರಚುವ ಮೂಲಕ ಕ್ರೂರವಾಗಿ ದೈಹಿಕ ಹಿಂಸೆ ನೀಡುತ್ತಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ಆರೋಪಿಗಳಾದ ಮೊಹಮ್ಮದ್ ಶರೀಫ್, ಸೌಗುರಬಾನು ಮತ್ತು ಆಶಾ ಫರಾನಾ ಎಂಬುವವರು ಸೇರಿ ಪೀಡಿತೆಗೆ ಅವಾಚ್ಯವಾಗಿ ಬೈದು, ಪತಿಗೆ ಎರಡನೇ ಮದುವೆ ಮಾಡಿಕೊಳ್ಳುವಂತೆ ಪ್ರಚೋದನೆ ನೀಡುತ್ತಿದ್ದರು ಎನ್ನಲಾಗಿದೆ.
ಆರೋಪಿ ಉಮ್ಮರ್ ಫರೀದ್ ತನ್ನ ಮಕ್ಕಳನ್ನು ಶಾಲೆಗೆ ಸೇರಿಸದೆ ಹಠ ಹಿಡಿದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಹೆಂಡತಿ ಮತ್ತು ಮಕ್ಕಳನ್ನು ಮನೆಯಿಂದ ಹೊರಹಾಕಿದ್ದನು. ನಂತರ ಜಮಾತ್‌ನವರ ಮಧ್ಯಸ್ಥಿಕೆಯಿಂದ ಮನೆಗೆ ಕರೆದುಕೊಂಡಿದ್ದರೂ, ಕಿರುಕುಳ ನಿಂತಿರಲಿಲ್ಲ. ಕಳೆದ ಆರು ತಿಂಗಳ ಹಿಂದೆ ಪೀಡಿತೆಯ ತವರು ಮನೆಗೆ ತೆರಳಿದ ಆರೋಪಿಗಳು, “ಬಾಕಿ ಹಣ ನೀಡದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇವೆ ಮತ್ತು ಮಕ್ಕಳನ್ನು ಶಾಲೆಗೆ ಹಾಕುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.
ಸದ್ಯ ಪೀಡಿತೆ ಸಹಾರ ಗಪೂರ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಕೆಳಗಿನ ಕಲಂ ಅಡಿಯಲ್ಲಿ BNS ಕಲಂ: 85 (ಪತಿಗೆ ಅಥವಾ ಸಂಬಂಧಿಕರಿಂದ ಹಿಂಸೆ), 352, 351(2), ಮತ್ತು 3(5). DP Act: ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 3 ಮತ್ತು 4. ಪ್ರಕರಣ ದಾಖಲಾಗಿದೆ.
ಪೊಲೀಸರು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.