


ಡೈಲಿವಾರ್ತೆ:05/ಏಪ್ರಿಲ್ /2026

ತಡಿಯಂಡಮೋಳ್ ಬೆಟ್ಟದಲ್ಲಿ ಕೇರಳದ ಮಹಿಳೆ ನಾಪತ್ತೆ: 4ನೇ ದಿನವೂ ಮುಂದುವರಿದ ತೀವ್ರ ಶೋಧ

ಮಡಿಕೇರಿ: ಕೊಡಗು ಜಿಲ್ಲೆಯ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್‌ಗೆ ತೆರಳಿ ನಾಪತ್ತೆಯಾಗಿರುವ ಕೇರಳ ಮೂಲದ ಶರಣ್ಯ (36) ಅವರ ಪತ್ತೆಗಾಗಿ ನಾಲ್ಕನೇ ದಿನವೂ ಶೋಧ ಕಾರ್ಯ ತೀವ್ರಗೊಂಡಿದೆ.
ಅರಣ್ಯ ಇಲಾಖೆ, ಪೊಲೀಸ್ ಪಡೆ ಹಾಗೂ ಸ್ಥಳೀಯ ಗ್ರಾಮಸ್ಥರು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ, ಮಹಿಳೆಯ ಸುಳಿವು ಮಾತ್ರ ಇನ್ನೂ ಲಭ್ಯವಾಗಿಲ್ಲ.
ಘಟನೆಯ ಹಿನ್ನೆಲೆ:
ಕೇರಳದಲ್ಲಿ ಉದ್ಯೋಗದಲ್ಲಿರುವ ಶರಣ್ಯ ಅವರು ಏಕಾಂಗಿ ಪ್ರವಾಸದ ಹಂಬಲದೊಂದಿಗೆ ಮಡಿಕೇರಿ ತಾಲ್ಲೂಕಿನ ಯವಕಪಾಡಿ ಗ್ರಾಮದ ಹೋಂಸ್ಟೇಯಲ್ಲಿ ತಂಗಿದ್ದರು. ಗುರುವಾರ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಿದ್ದ ಅವರು ಒಬ್ಬಂಟಿಯಾಗಿಯೇ ಚಾರಣಕ್ಕೆ ತೆರಳಲು ಮುಂದಾಗಿದ್ದರು. ಆದರೆ, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆಯು ಅವರನ್ನು ಇತರ ಪ್ರವಾಸಿಗರ ತಂಡದೊಂದಿಗೆ ಕಳುಹಿಸಿಕೊಟ್ಟಿತ್ತು.
ಬೆಟ್ಟಕ್ಕೆ ತೆರಳಿದ್ದ ಇತರ ಪ್ರವಾಸಿಗರು ಸಂಜೆ ವೇಳೆಗೆ ಹಿಂತಿರುಗಿದ್ದರೂ, ಶರಣ್ಯ ಮಾತ್ರ ಬರಲಿಲ್ಲ. ಇದರಿಂದ ಆತಂಕಗೊಂಡ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತಂದರು. ಅಂದೇ ರಾತ್ರಿ ಕುಡಿಯರ ಮುತ್ತಪ್ಪ ಅವರ ನೇತೃತ್ವದಲ್ಲಿ ಸ್ಥಳೀಯರು ಹಾಗೂ ಇಲಾಖಾ ಸಿಬ್ಬಂದಿ ತಡರಾತ್ರಿಯವರೆಗೂ ಹುಡುಕಾಟ ನಡೆಸಿದ್ದರು.
5 ತಂಡಗಳಿಂದ ಕಾರ್ಯಾಚರಣೆ:
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಶೋಧ ಕಾರ್ಯಕ್ಕಾಗಿ 5 ವಿಶೇಷ ತಂಡಗಳನ್ನು ರಚಿಸಿವೆ. ಇದರಲ್ಲಿ ಪೊಲೀಸರ 2 ತಂಡ ಹಾಗೂ ಅರಣ್ಯ ಇಲಾಖೆಯ 3 ತಂಡಗಳು ಕಾರ್ಯಾಚರಣೆಯಲ್ಲಿ ನಿರತವಾಗಿವೆ. ದಟ್ಟ ಅರಣ್ಯ ಪ್ರದೇಶವಾಗಿರುವುದರಿಂದ ಚಾರಣಿಗರ ಪತ್ತೆಗಾಗಿ ಡ್ರೋನ್ ಹಾಗೂ ಶ್ವಾನದಳವನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ.
ನಾಪೋಕ್ಲು ಎಸ್‌ಐ ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಈ ಕುರಿತು ಮಾಹಿತಿ ನೀಡಿರುವ ಕೊಡಗು ಎಸ್ಪಿ ಬಿಂದುಮಣಿ ಅವರು, “ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಕೇರಳದಲ್ಲಿರುವ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ತಾಂತ್ರಿಕ ನೆರವು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಆದಷ್ಟು ಬೇಗ ಅವರನ್ನು ಪತ್ತೆಹಚ್ಚುವ ಪ್ರಯತ್ನ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಪ್ರಸ್ತುತ ಯವಕಪಾಡಿ ಸುತ್ತಮುತ್ತಲಿನ ಕಾಡಿನ ಮೂಲೆ ಮೂಲೆಗಳಲ್ಲೂ ಕಾರ್ಯಾಚರಣೆ ನಡೆಯುತ್ತಿದ್ದು, ಮಹಿಳೆ ಕಾಡಿನ ದಾರಿ ತಪ್ಪಿದ್ದಾರೆಯೇ ಅಥವಾ ಕಾಡು ಪ್ರಾಣಿಗಳ ಹಾವಳಿಗೆ ಸಿಲುಕಿದ್ದಾರೆಯೇ ಎಂಬ ಆತಂಕ ಸೃಷ್ಟಿಯಾಗಿದೆ.