ಡೈಲಿವಾರ್ತೆ: 16/ಜು./2026

ಮುಸ್ತಾಕ್ ಸಾವಿನ ಪ್ರಕರಣಕ್ಕೆ ಹೊಸ ತಿರುವು: ಸಹಚರ ಬಂಧನ

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಶಕ್ತಿನಗರ ಎಸ್.ಎಲ್.ವಿ. ಇ ಪವರ್ ಪ್ರೈವೇಟ್ ಲಿಮಿಟೆಡ್ ರೀಸಿವಿಂಗ್ ಸ್ಟೇಷನ್ ಸಮೀಪ ಜುಲೈ 1ರಂದು ನಡೆದಿದ್ದ ಮುಸ್ತಾಕ್ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಜೊತೆಯಲ್ಲಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂದಿತ ಆರೋಪಿ ಕಾಶಿಪಟ್ಣ ಗ್ರಾಮದ ಇಬ್ರಾಹಿಂ ಲತೀಫ್ (36)ಎಂದು ಗುರುತಿಸಲಾಗಿದೆ.

ಘಟನೆ ವಿವರ :
ಮೃತ ಮುಸ್ತಾಕ್ ಹಾಗೂ ಇಬ್ರಾಹಿಂ ಲತೀಫ್ ಇಬ್ಬರೂ ಸೇರಿ ರಿಸೀವಿಂಗ್ ಸ್ಟೇಷನ್ ಸಮೀಪ ಕಳ್ಳತನದ ಉದ್ದೇಶದಿಂದ ತೆರಳಿದ್ದರು ಎಂಬ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ. ಈ ವೇಳೆ ಮುಸ್ತಾಕನ ಕುತ್ತಿಗೆಗೆ ತಂತಿ ಸಿಲುಕಿ ಆತ ಮೃತಪಟ್ಟಿರಬಹುದೆಂದು ತನಿಖೆಯಲ್ಲಿ ಶಂಕಿಲಾಗಿದೆ.

ಪ್ರಕರಣದ ತನಿಖೆ ವೇಳೆ ಇಬ್ಬರು ಸೇರಿ ಕಳ್ಳತನಕ್ಕೆ ಯತ್ನಿಸಿದಕ್ಕೆ ಸಂಬಂಧಿಸಿದ ಪ್ರಾಥಮಿಕ ಸಾಕ್ಷ್ಯಗಳು ಲಭ್ಯವಾದ ಹಿನ್ನೆಲೆಯಲ್ಲಿ ಪೊಲೀಸರು ಇಬ್ರಾಹಿಂ ಲತೀಫ್ ನನ್ನು ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇನ್ನೊಂದೆಡೆ ಮುಸ್ತಾಕನ ಮೃತ ದೇಹ ಪತ್ತೆಯಾದ ಸ್ಥಳದ ಸಮೀಪ ರಿಸೀವಿಂಗ್ ಸ್ಟೇಶನ ಕಾಂಪೌಂಡ್ ಒಳ ಭಾಗದಲ್ಲಿ ಬಳಸಿದ ಹಳೆಯ ಆಲ್ಯೂಮಿನಿಯಂ ವಯರ್ ತುಂಡುಗಳು ಪತ್ತೆಯಾಗಿದ್ದವು ಇದರಿಂದ ಅನುಮಾನ ಗೊಂಡ ಸಂಸ್ಥೆಯ ವ್ಯವಸ್ಥಾಪಕರು ಸ್ಟೇಷನ್ ನಲ್ಲಿ ಸಂಗ್ರಹಿಸಿ ಇಟ್ಟಿದ್ದ ಆಲ್ಯೂಮಿನಿಯಂ
ವೈರ್ ಬಂಡಲ್ ಗಳು ಹಾಗೂ ಇತರ ಸಾಮಗ್ರಿಗಳನ್ನು ಪರಿಶೀಲಿಸಿದಾಗ ಹಳೆಯ ಅಲ್ಯೂಮಿನಿಯಂ ವೈಯರುಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದು ಅದರ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದ ಕುರಿತು ಬೆಳ್ತಂಗಡಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದು ಕಳ್ಳತನದ ಜಾಲ ಹಾಗೂ ಘಟನೆಗಳ ನಿಖರ ಕಾರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.