



ಡೈಲಿವಾರ್ತೆ:14/ಏಪ್ರಿಲ್ /2026

ಅಮೆರಿಕಾ– ಇರಾನ್ ಸಂಘರ್ಷ: ಶಾಶ್ವತ ಶಾಂತಿ ಸಾಧನೆ ಒಂದು ದಿನದಲ್ಲಿ ಸಾಧ್ಯವಿಲ್ಲ, ಸಂಘರ್ಷ ಅಂತ್ಯಕ್ಕೆ ಇನ್ನೂ ಸಮಯ ಬೇಕು – ಪಾಕಿಸ್ತಾನ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಅಮೆರಿಕಾ–ಇರಾನ್ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆ ನಡುವೆ ಮಹತ್ವದ ಹೇಳಿಕೆ ನೀಡಿದ್ದು, ಈ ಸಂಘರ್ಷವನ್ನು ಶಾಂತಿಯುತವಾಗಿ ಬಗೆಹರಿಸಲು ಪಾಕಿಸ್ತಾನ ಸಂಪೂರ್ಣ ಶಕ್ತಿಯೊಂದಿಗೆ ಮಧ್ಯಸ್ಥಿಕೆ ವಹಿಸುತ್ತಿದೆ ಎಂದು ಹೇಳಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಉನ್ನತ ಮಟ್ಟದ ಮಾತುಕತೆಗಳ ಬಳಿಕ ಪರಿಸ್ಥಿತಿ ತಾತ್ಕಾಲಿಕವಾಗಿ ಶಮನಗೊಂಡಿದ್ದು, ಎರಡು ವಾರಗಳ ಕದನ ವಿರಾಮ ಇನ್ನೂ ಜಾರಿಯಲ್ಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಉಭಯ ರಾಷ್ಟ್ರಗಳ ನಡುವೆ ಇನ್ನೂ ಕೆಲವು ವಿಷಯಗಳು ಬಾಕಿ ಉಳಿದಿದ್ದರೂ, ಅವನ್ನು ಬಗೆಹರಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ” ಎಂದು ಹೇಳಿದರು.
ಅಮೆರಿಕಾ ಮತ್ತು ಇರಾನ್ ರಾಷ್ಟ್ರಗಳ ಪ್ರತಿನಿಧಿಗಳು ಶನಿವಾರ ಸುಮಾರು 21 ಗಂಟೆಗಳ ಕಾಲ ನಡೆದ ದೀರ್ಘ ಮಾತುಕತೆಯಲ್ಲಿ ಭಾಗವಹಿಸಿದ್ದವು. 1979ರ ನಂತರ ಮೊದಲ ಬಾರಿಗೆ ಈ ಎರಡು ದೇಶಗಳ ಉನ್ನತ ಮಟ್ಟದ ನಾಯಕರು ಮುಖಾಮುಖಿಯಾಗಿ ಚರ್ಚೆ ನಡೆಸಿರುವುದು ವಿಶೇಷವೆಂದು ಪರಿಗಣಿಸಲಾಗುತ್ತಿದೆ.
ಈ ಮಾತುಕತೆಗಳು ತಕ್ಷಣದ ಶಾಂತಿ ಒಪ್ಪಂದಕ್ಕೆ ದಾರಿ ಮಾಡಿಕೊಡದಿದ್ದರೂ, ಪರಸ್ಪರ ಸಂವಾದ ಆರಂಭವಾಗಿರುವುದು ಮುಂದಿನ ದಿನಗಳಲ್ಲಿ ದೊಡ್ಡ ಮುನ್ನಡೆಯಾಗಿ ಪರಿಗಣಿಸಲಾಗುತ್ತಿದೆ.
ಶರೀಫ್ ಅವರು ಇದನ್ನು “ಐತಿಹಾಸಿಕ ಕ್ಷಣ” ಎಂದು ವರ್ಣಿಸಿ, ಯುದ್ಧದ ಅಂಚಿನಲ್ಲಿದ್ದ ಪರಿಸ್ಥಿತಿಯನ್ನು ತಾತ್ಕಾಲಿಕ ಶಾಂತಿಗೆ ತರುವಲ್ಲಿ ಪಾಕಿಸ್ತಾನದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
47 ವರ್ಷಗಳಿಂದ ನೇರವಾಗಿ ಮಾತುಕತೆ ನಡೆಸದ ರಾಷ್ಟ್ರಗಳನ್ನು ಒಂದೇ ವೇದಿಕೆಯಲ್ಲಿ ಕೂಡಿ ಮಾತನಾಡಿಸುವುದು ಸುಲಭದ ಕೆಲಸವಲ್ಲ ಎಂದು ತಿಳಿಸಿದರು.
ಪಾಕಿಸ್ತಾನ ಈ ಮಾತುಕತೆಗಳಲ್ಲಿ ಪ್ರಮುಖ ಮಧ್ಯವರ್ತಿಯಾಗಿ ಹೊರಹೊಮ್ಮಿದ್ದು, ಸೇನಾ ಮುಖ್ಯಸ್ಥ ಆಸೀಮ್ ಮುನೀರ್ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್ ಅವರ ನೇತೃತ್ವದಲ್ಲಿ ನಡೆದ ಸಂಯೋಜಿತ ಪ್ರಯತ್ನಗಳಿಂದ ಈ ಸಂವಾದ ಸಾಧ್ಯವಾಯಿತು ಎಂದು ಶರೀಫ್ ಹೇಳಿದ್ದಾರೆ.
ಅಧಿಕಾರಿಗಳು ದಿನರಾತ್ರಿ ಶ್ರಮಿಸಿ, ಹಲವು ಬಾರಿ ಮಾತುಕತೆ ಮುರಿಯುವ ಹಂತಕ್ಕೆ ಬಂದಿದ್ದರೂ ಅದನ್ನು ಮುಂದುವರೆಯುವಂತೆ ಮಾಡುವಲ್ಲಿ ಯಶಸ್ವಿಯಾದರು ಎಂದು ವಿವರಿಸಿದರು.
ಇದೇ ವೇಳೆ ಇತಿಹಾಸದಲ್ಲಿನ ಪ್ರಮುಖ ಶಾಂತಿ ಒಪ್ಪಂದಗಳನ್ನು ಉಲ್ಲೇಖಿಸಿದ ಶರೀಫ್ ಅವರು , ಶಾಶ್ವತ ಶಾಂತಿ ಸಾಧನೆ ಒಂದು ದಿನದಲ್ಲಿ ಸಾಧ್ಯವಿಲ್ಲ ಎಂದು ಹೇಳಿದರು.
ಒಸ್ಲೋ ಒಪ್ಪಂದ, ಜೆನೀವಾ ಒಪ್ಪಂದ, ಗುಡ್ ಫ್ರೈಡೇ ಒಪ್ಪಂದಗಳಂತೆ ಅನೇಕ ಶಾಂತಿ ಪ್ರಕ್ರಿಯೆಗಳು ತಿಂಗಳುಗಳು ಅಥವಾ ವರ್ಷಗಳ ಕಾಲ ತೆಗೆದುಕೊಂಡಿವೆ ಎಂದು ನೆನಪಿಸಿದರು. ಇದೇ ರೀತಿಯಲ್ಲಿ ಅಮೆರಿಕಾ–ಇರಾನ್ ಮಾತುಕತೆಗೂ ಸಮಯ ಬೇಕಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿ ಮಾರ್ಗವನ್ನು ತಡೆಹಿಡಿಯುವ ನಿರ್ಧಾರ ಕೈಗೊಂಡಿದ್ದು, ಇದರಿಂದ ಜಾಗತಿಕ ರಾಜಕೀಯ ಹಾಗೂ ಆರ್ಥಿಕ ಪರಿಸ್ಥಿತಿಯಲ್ಲಿ ಆತಂಕ ಹೆಚ್ಚಾಗಿದೆ.
ಇರಾನ್‌ನ ತೈಲ ರಫ್ತಿಗೆ ಹೊಡೆತ ನೀಡುವ ಈ ಕ್ರಮದಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಹೆಚ್ಚುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಹಲವಾರು ದೇಶಗಳು ಪರಿಸ್ಥಿತಿಯನ್ನು ಆತಂಕದಿಂದ ಗಮನಿಸುತ್ತಿವೆ.