



ಡೈಲಿವಾರ್ತೆ:14/ಏಪ್ರಿಲ್ /2026

ಕಾರ್ಕಳದಲ್ಲಿ ಬಾವಿಗೆ ಬಿದ್ದ ಚಿರತೆ ರಕ್ಷಣೆ – ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ

ಕಾರ್ಕಳ: ತಾಲೂಕಿನ ನಿಟ್ಟೆ ಸಮೀಪದ ಬೋರ್ಗಲ್ಲುಗುಡ್ಡೆ ಪ್ರದೇಶದಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಆಹಾರ ಅರಸಿ ಕಾಡಿನಿಂದ ಹೊರಬಂದು ಸ್ಥಳೀಯ ಮನೆಗಳತ್ತ ಬಂದಿದ್ದ ಚಿರತೆ, ಅಜಾಗರೂಕತೆಯಿಂದ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಬಾವಿಯೊಳಗೆ ಚಿರತೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಮಾಹಿತಿ ದೊರಕುತ್ತಿದ್ದಂತೆಯೇ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ರುತ್ರನ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಚಂದ್ರಕಾಂತ್ ಕರುಣಾಕರ್, ಗಸ್ತು ಅರಣ್ಯಪಾಲಕ ಸುರೇಶ್ ಸೇರಿದಂತೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಚಿರತೆಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.
ರಕ್ಷಣೆ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಚಿರತೆಯನ್ನು ಬಳಿಕ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ ಎಂದು ತಿಳಿದುಬಂದಿದೆ.