



ಡೈಲಿವಾರ್ತೆ:14/ಏಪ್ರಿಲ್ /2026

ಲಂಡನ್ ಸುಂದರಿಯ 5 ಕೋಟಿಯ ಆಸೆಗೆ ಬಿದ್ದು 1.13 ಲಕ್ಷ ಕಳೆದುಕೊಂಡ ಕುತ್ಪಾಡಿಯ ವ್ಯಕ್ತಿ – ಸೈಬರ್ ವಂಚನೆಯ ರೋಚಕ ಕಥೆ!

ಉಡುಪಿ: ಲಂಡನ್ ನಿವಾಸಿ ಎಂದು ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಉಡುಪಿಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಕುತ್ಪಾಡಿ ನಿವಾಸಿ, ಮಂಗಳೂರಿನ ಹೋಟೆಲ್‌ನಲ್ಲಿ ಶೆಫ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಾಂಡು ಕರಿಯಪ್ಪ ಪೂಜಾರಿ (62) ಅವರು ವಂಚನೆಗೊಳಗಾದವರು.
ಪಾಂಡು ಅವರಿಗೆ ವಾಟ್ಸಾಪ್ ಮೂಲಕ ‘ಏಮಿಲ್ಡಾ ವಿಲಿಯಂ’ ಎಂಬಾಕೆ ಪರಿಚಯವಾಗಿದ್ದು, ತಾನು ಲಂಡನ್ ನಿವಾಸಿ ಎಂದು ನಂಬಿಸಿದ್ದಳು. ಭಾರತದಲ್ಲಿ ಕಾಸ್ಮೆಟಿಕ್ ಮತ್ತು ಹೋಟೆಲ್ ವ್ಯವಹಾರ ಮಾಡುವುದಾಗಿ ತಿಳಿಸಿದ್ದ ಆಕೆ, ನಿಮ್ಮನ್ನು ಭೇಟಿಯಾಗಲು ಮಂಗಳೂರಿಗೆ ಬರುವುದಾಗಿ ಹೇಳಿದ್ದಳು. ಏಪ್ರಿಲ್ 7ರಂದು ತಾನು ಲಂಡನ್‌ನಿಂದ ದೆಹಲಿಗೆ ಬರುತ್ತಿರುವುದಾಗಿ ವಿಮಾನದ ಟಿಕೆಟ್ ಪ್ರತಿಯನ್ನು ಪಾಂಡು ಅವರಿಗೆ ಕಳುಹಿಸಿ ನಂಬಿಕೆ ದೃಢಪಡಿಸಿಕೊಂಡಿದ್ದಳು.
ಘಟನೆ ವಿವರ:
ಏಪ್ರಿಲ್ 8ರಂದು ಬೆಳಿಗ್ಗೆ ಪಾಂಡು ಅವರಿಗೆ ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿ, “ನಿಮ್ಮ ಸ್ನೇಹಿತೆ ಏಮಿಲ್ಡಾ ವಿಲಿಯಂ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರ ಬಳಿ 5 ಕೋಟಿ ರೂಪಾಯಿ ಮೌಲ್ಯದ ಡಿಮಾಂಡ್ ಡ್ರಾಫ್ಟ್ (DD) ಹಾಗೂ ಅತೀ ಹೆಚ್ಚು ಬೆಲೆಬಾಳುವ ವಸ್ತುಗಳಿವೆ. ಇದನ್ನು ಬಿಡಿಸಿಕೊಳ್ಳಲು ನೀವು ತಕ್ಷಣವೇ 70,000/- ರೂಪಾಯಿ ಹಣ ಪಾವತಿಸಬೇಕು ಎಂದು ತಿಳಿಸಿದ್ದಾಳೆ.
ಈ ವೇಳೆ ಏಮಿಲ್ಡಾ ಕೂಡ ಅಳುತ್ತಾ ಮಾತನಾಡಿ ಹಣ ನೀಡುವಂತೆ ಪಾಂಡು ಅವರನ್ನು ವಿನಂತಿಸಿದ್ದಾಳೆ.
ಇದನ್ನು ನಂಬಿದ ಪಾಂಡು ಅವರು ವಿವಿಧ ಹಂತಗಳಲ್ಲಿ ಒಟ್ಟು 1,13,300/- ರೂಪಾಯಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ತಮ್ಮ ಖಾತೆಯಿಂದ ಹಾಗೂ ತಮ್ಮ ಸಂಬಂಧಿ ನಮೀತ್ ಎಂಬುವವರ ಖಾತೆಯ ಮೂಲಕ ಸ್ಕ್ಯಾನರ್ ಬಳಸಿ ಈ ಹಣವನ್ನು ವರ್ಗಾಯಿಸಿದ್ದಾರೆ. ಬಳಿಕ ಮತ್ತಷ್ಟು ಹಣಕ್ಕೆ ಬೇಡಿಕೆ ಬಂದಾಗ ತಾವು ವಂಚನೆಗೆ ಒಳಗಾಗಿರುವುದು ಅವರಿಗೆ ಅರಿವಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಿ.ಎನ್.ಎಸ್ ಕಾಯ್ದೆಯ ಕಲಂ 318(4) ಹಾಗೂ ಐಟಿ ಕಾಯ್ದೆ 66(ಡಿ) ಅನ್ವಯ ತನಿಖೆ ಕೈಗೊಂಡಿದ್ದಾರೆ.