



ಡೈಲಿವಾರ್ತೆ:20/ಏಪ್ರಿಲ್ /2026

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ‘ಬೆಸುಗೆ-2026’ ಬೇಸಿಗೆ ಶಿಬಿರಕ್ಕೆ ವಿಜೃಂಭಣೆಯ ಚಾಲನೆ: ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆಗಳು ಪೂರಕ: ಆರಾಧ್ಯ ಎಸ್. ಶೆಟ್ಟಿ

ಕುಂದಾಪುರ: ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯ ಪುಸ್ತಕ ಅಥವಾ ಮೊಬೈಲ್ ಪರದೆಯೊಳಗೆ ಬಂಧಿಯಾಗದೆ, ಇಂತಹ ಬೇಸಿಗೆ ಶಿಬಿರಗಳ ಮೂಲಕ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ರಾಷ್ಟ್ರಮಟ್ಟದ ಚೆಸ್ ಕ್ರೀಡಾಪಟು ಕುಮಾರಿ ಆರಾಧ್ಯ ಎಸ್. ಶೆಟ್ಟಿ ಅಭಿಮತ ವ್ಯಕ್ತಪಡಿಸಿದರು.

ಕುಂದಾಪುರ ತಾಲೂಕಿನ ಸುಣ್ಣಾರಿಯ ಪ್ರತಿಷ್ಠಿತ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಹೊರಹಾಕುವ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಗಮ “ಬೆಸುಗೆ-2026” ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿ ಶಿಬಿರವು ಬೆಟ್ಟದ ನೆಲ್ಲಿಕಾಯಿಯಂತೆ ವಿವಿಧ ಪರಿಸರದ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಸುಂದರ ವೇದಿಕೆಯಾಗಿದೆ ಎಂದರು.
ನಾಯಕತ್ವ ಎಂದರೆ ದಾರಿ ತೋರಿಸುವುದು: ನರೇಂದ್ರ ಕುಮಾರ್ ಕೋಟ

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಸಂಪನ್ಮೂಲ ವ್ಯಕ್ತಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಶ್ರೀ ನರೇಂದ್ರ ಕುಮಾರ್ ಕೋಟ ಮಾತನಾಡಿ, ನಾಯಕತ್ವ ಎಂದರೆ ಕೇವಲ ಆದೇಶ ನೀಡುವುದಲ್ಲ, ಬದಲಾಗಿ ಜೊತೆ ನಿಂತು ದಾರಿ ತೋರಿಸುವುದು. ಮಕ್ಕಳ ಮನಸ್ಸನ್ನು ನಾವು ಸರಿಯಾಗಿ ರೂಪಿಸಿದರೆ ಈ ಜಗತ್ತು ತಾನಾಗಿಯೇ ಸುಂದರವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ವಿವಿಧ ಕಥೆ ಮತ್ತು ಉದಾಹರಣೆಗಳ ಮೂಲಕ ಸಮಸ್ಯೆಗಳಿಗೆ ತಾಳ್ಮೆಯಿಂದ ಪರಿಹಾರ ಕಂಡುಕೊಳ್ಳುವ ಜೀವನ ಮೌಲ್ಯಗಳನ್ನು ಅವರು ಶಿಬಿರಾರ್ಥಿಗಳಿಗೆ ವಿವರಿಸಿದರು.
ನಿರೀಕ್ಷೆಗೂ ಮೀರಿದ ಸ್ಪಂದನೆ: ಎಂ. ಮಹೇಶ್ ಹೆಗ್ಡೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ರೀ ಎಂ. ಮಹೇಶ್ ಹೆಗ್ಡೆ ಮಾತನಾಡಿ ಆರಂಭದಲ್ಲಿ ಕೇವಲ 150 ಮಕ್ಕಳನ್ನು ನಿರೀಕ್ಷಿಸಲಾಗಿತ್ತು, ಆದರೆ ಪೋಷಕರ ಅತೀವ ಆಸಕ್ತಿಯಿಂದಾಗಿ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರಕ್ಕೆ ನೋಂದಾಯಿಸಿಕೊಂಡಿದ್ದಾರೆ. ಸಾಧಕರು ನಡೆದು ಬಂದ ಹಾದಿ ಮಕ್ಕಳಿಗೆ ಸ್ಫೂರ್ತಿಯಾಗಲಿ ಎನ್ನುವ ಉದ್ದೇಶದಿಂದ ರಾಷ್ಟ್ರಮಟ್ಟದ ಸಾಧಕಿ ಆರಾಧ್ಯ ಶೆಟ್ಟಿಯವರಿಂದ ಶಿಬಿರ ಉದ್ಘಾಟಿಸಲಾಗಿದೆ. ಅಕ್ಟೋಬರ್‌ನಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಅವರಿಗೆ ನಮ್ಮ ಹಾರೈಕೆಗಳಿವೆ ಎಂದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ‘ಬೆಸುಗೆ’ ದಾರಿದೀಪ: ಪ್ರಾಂಶುಪಾಲ ನಾಗರಾಜ ಶೆಟ್ಟಿ

ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಾಂಶುಪಾಲ ನಾಗರಾಜ ಶೆಟ್ಟಿ ಅವರು, “ಮಕ್ಕಳು ಮೊಬೈಲ್ ವ್ಯಾಮೋಹದಿಂದ ಹೊರಬಂದು ಸಮಾಜದೊಂದಿಗೆ ಪ್ರಾಯೋಗಿಕವಾಗಿ ಬೆರೆಯುವಂತಾಗಲು ಈ ಶಿಬಿರ ಪೂರಕವಾಗಿದೆ. ಆರಂಭದಲ್ಲಿ 150 ಮಕ್ಕಳನ್ನು ನಿರೀಕ್ಷಿಸಲಾಗಿತ್ತು, ಆದರೆ ಪೋಷಕರ ಅಭೂತಪೂರ್ವ ಸ್ಪಂದನೆಯಿಂದಾಗಿ ಸುಮಾರು 600ಕ್ಕೂ ಹೆಚ್ಚು ಪೋಷಕರು ತಮ್ಮ ಮಕ್ಕಳನ್ನು ಈ ಶಿಬಿರಕ್ಕೆ ಸೇರಿಸಲು ಉತ್ಸುಕತೆ ತೋರಿರುವುದು ಸಂಸ್ಥೆಯ ಮೇಲಿನ ವಿಶ್ವಾಸಕ್ಕೆ ಸಾಕ್ಷಿ,” ಎಂದರು.
ಈ ಐದು ದಿನಗಳ ಶಿಬಿರವು ಕೇವಲ ಚಟುವಟಿಕೆಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬಹುದಾದ ಸಂಸ್ಕಾರ ಮತ್ತು ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ಶಿಬಿರಾರ್ಥಿಗಳಿಗೆ ಯಾವುದೇ ಕುಂದುಕೊರತೆಯಾಗದಂತೆ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಶಿಸ್ತುಬದ್ಧವಾಗಿ ಪಾಲ್ಗೊಳ್ಳಲು ಕರೆ ನೀಡಿದರು.

ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜಿನಿ ಪಿ. ಆಚಾರ್ಯ, ಸಿಬಿಎಸ್‌ಇ ವಿಭಾಗದ ಸಂಯೋಜಕಿ ಶ್ರೀಮತಿ ವಿಶಾಲ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜಿನಿ ಪಿ. ಆಚಾರ್ಯ ಸ್ವಾಗತಿಸಿ, ಶಿಕ್ಷಕ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿಶಾಲ ಶೆಟ್ಟಿ ವಂದನಾರ್ಪಣೆ ಮಾಡಿದರು. ಶಿಕ್ಷಕ ವೃಂದ, ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಈ ಶೈಕ್ಷಣಿಕ ಹಬ್ಬಕ್ಕೆ ಸಾಕ್ಷಿಯಾದರು.