ಡೈಲಿವಾರ್ತೆ: 27/ಜು./2026

ಕೋಟ ಬ್ಲಾಕ್ ಕಾಂಗ್ರೆಸ್ ಪದಗ್ರಹಣ: ಅಲ್ಪಸಂಖ್ಯಾತ ಮುಖಂಡರ ಕಡೆಗಣನೆಗೆ ಸಮುದಾಯದ ಅಸಮಾಧಾನ

ಕೋಟ: ನೂತನ ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ತಿಮ್ಮ ಪೂಜಾರಿ ಅವರು ಜುಲೈ 26 ರಂದು ಅಧಿಕಾರ ವಹಿಸಿಕೊಂಡ ಪದಗ್ರಹಣ ಸಮಾರಂಭವು ವಿಜೃಂಭಣೆಯಿಂದ ಜರುಗಿದರೂ, ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮುಖಂಡರಿಗೆ ಸೂಕ್ತ ಮನ್ನಣೆ ನೀಡದಿರುವುದು ಈಗ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಅಲ್ಪಸಂಖ್ಯಾತ ನಾಯಕರು ಪಕ್ಷದ ಸಂಘಟನೆಯಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದರೂ, ಅವರಿಗೆ ಸಮಾರಂಭದಲ್ಲಿ ಯಾವುದೇ ರೀತಿಯ ಸೂಕ್ತ ಗೌರವ ಅಥವಾ ಪ್ರಾತಿನಿಧ್ಯ ನೀಡದಿರುವುದು ವಿಷಾದನೀಯ ಎಂದು ಸಮುದಾಯದ ಪ್ರಮುಖರು ಕಳವಳ ವ್ಯಕ್ತಪಡಿಸಿದ್ದಾರೆ.
ಸಮಾರಂಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಮುಖಂಡರನ್ನು ಗೌರವಿಸಲಾಯಿತಾದರೂ, ಪ್ರಸ್ತುತ ಸಕ್ರಿಯವಾಗಿ ದುಡಿಯುತ್ತಿರುವ ಅಲ್ಪಸಂಖ್ಯಾತ ಮುಖಂಡರನ್ನು ಕಡೆಗಣಿಸಿರುವುದು ಕಾರ್ಯಕರ್ತರ ಮನಸ್ಸಿಗೆ ನೋವುಂಟುಮಾಡಿದೆ. ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ, ನಿರಂತರ ಬೆಂಬಲ ನೀಡುತ್ತಾ ಬಂದಿರುವ ಸಮುದಾಯಕ್ಕೆ ಪಕ್ಷದ ಕಾರ್ಯಕ್ರಮಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗದಿರುವುದು ಅವರಲ್ಲಿ ತೀವ್ರ ಬೇಸರ ಮೂಡಿಸಿದೆ.

ಇಂತಹ ಘಟನೆಗಳು ದೀರ್ಘಕಾಲದಿಂದ ಪಕ್ಷಕ್ಕೆ ನಿಷ್ಠೆಯಿಂದಿರುವ ಕಾರ್ಯಕರ್ತರ ಆತ್ಮಸ್ಥೈರ್ಯವನ್ನು ಕುಸಿಯುವಂತೆ ಮಾಡುತ್ತದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ನಡೆಯುವ ಪಕ್ಷದ ಎಲ್ಲಾ ಅಧಿಕೃತ ಕಾರ್ಯಕ್ರಮಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ನಾಯಕರು ಹಾಗೂ ಕಾರ್ಯಕರ್ತರಿಗೆ ಸಮಾನ ಗೌರವ ಮತ್ತು ಸೂಕ್ತ ಸ್ಥಾನಮಾನ ನೀಡಬೇಕು. ಆ ಮೂಲಕ ಪಕ್ಷದೊಳಗಿನ ಒಗ್ಗಟ್ಟು ಹಾಗೂ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.