



ಡೈಲಿವಾರ್ತೆ:21ಏಪ್ರಿಲ್ /2026

ವರ್ಗಾವಣೆ ಆದೇಶಕ್ಕೂ ಅಡಚಣೆ: ಮಂಗಳೂರು ಪೊಲೀಸರಲ್ಲಿ ಅಸಮಾಧಾನ – ಡಿಜಿಪಿಗೆ ಮನವಿ, ಹಂತ ಹಂತವಾಗಿ ರಿಲೀವ್ ಸೂಚನೆ

ಮಂಗಳೂರು, ಏಪ್ರಿಲ್ 21: ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕ (ಡಿಜಿಪಿ) ಡಾ. ಎಂ.ಎ. ಸಲೀಂ ಮಂಗಳೂರಿಗೆ ಭೇಟಿ ನೀಡಿ, ಮಂಗಳೂರು ಕಮಿಷನರೇಟ್ ಕಚೇರಿಯಲ್ಲಿ ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
ಸಭೆಯಲ್ಲಿ ಕಾನೂನು ಸುವ್ಯವಸ್ಥೆ, ಸಿಬ್ಬಂದಿ ವ್ಯವಸ್ಥಾಪನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು.ಸಭೆಯ ವೇಳೆ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್‌ಟೇಬಲ್‌ಗಳ ವರ್ಗಾವಣೆ ವಿಚಾರ ಗಂಭೀರ ಚರ್ಚೆಗೆ ಗ್ರಾಸವಾಯಿತು. ಹತ್ತು ವರ್ಷಗಳ ಸೇವೆಯ ಬಳಿಕ ವರ್ಗಾವಣೆಗೆ ಆದೇಶ ಹೊರಡಿಸಿದ್ದರೂ, ಮಂಗಳೂರು ಕಮಿಷನರ್u ಸುಧೀರ್ ರೆಡ್ಡಿ ಅವರು ಸಿಬ್ಬಂದಿಯನ್ನು ರಿಲೀವ್ ಮಾಡದೇ ಇರುವುದಾಗಿ ಆರೋಪಿಸಿ, ಸಿಬ್ಬಂದಿ ಕುಟುಂಬಸ್ಥರು ಡಿಜಿಪಿ ಸಲೀಂ ಅವರಿಗೆ ಮನವಿ ಸಲ್ಲಿಸಿದರು.
ಕೋಮುಗಲಭೆ ಸಾಧ್ಯತೆ ಕಾರಣ ಹೇಳಿ ನಮ್ಮನ್ನು ರಿಲೀವ್ ಮಾಡಲಾಗುತ್ತಿಲ್ಲ. ನಾವು ಹತ್ತು ವರ್ಷಗಳಿಂದ ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದೇವೆ. ಊರಿನಲ್ಲಿ ವಯಸ್ಸಾದ ಪೋಷಕರು ಇದ್ದಾರೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಿವೆ. ವರ್ಗಾವಣೆ ಆದೇಶ ಬಂದಿದ್ದು ನಾಲ್ಕು ತಿಂಗಳು ಕಳೆದರೂ ಬಿಡುಗಡೆ ಮಾಡದಿರುವುದು ಅನ್ಯಾಯ ಎಂದು ಕುಟುಂಬ ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ಇದೇ ವೇಳೆ ಮಕ್ಕಳ ಶಿಕ್ಷಣ ಸೇರಿದಂತೆ ಕುಟುಂಬ ಸಂಬಂಧಿತ ಸಮಸ್ಯೆಗಳು ಎದುರಾಗುತ್ತಿರುವುದರಿಂದ ತಕ್ಷಣ ನ್ಯಾಯ ಒದಗಿಸುವಂತೆ ಅವರು ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆಗಳಿಗೆ ಸ್ಪಂದನೆ ದೊರಕದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಅವರು, ಅಗತ್ಯವಿದ್ದರೆ ಪಾದಯಾತ್ರೆ ಮೂಲಕ ತೆರಳಿ ಡಿಜಿಪಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
ಪ್ರಗತಿ ಪರಿಶೀಲನೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಡಿಜಿಪಿ ಸಲೀಂ, ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿದೆ. ಇದೇ ಮಟ್ಟವನ್ನು ಮುಂದುವರಿಸಬೇಕು ಎಂದು ಸೂಚನೆ ನೀಡಿದ್ದೇನೆ. ಉತ್ತರ ಕರ್ನಾಟಕ ಸಿಬ್ಬಂದಿಯ ವರ್ಗಾವಣೆ ಕುರಿತ ಮನವಿಯನ್ನು ಗಮನಕ್ಕೆ ತೆಗೆದುಕೊಂಡಿದ್ದು, ಹಂತ ಹಂತವಾಗಿ ಸುಮಾರು 15 ಶೇಕಡಾ ಸಿಬ್ಬಂದಿಯನ್ನು ರಿಲೀವ್ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಹೇಳಿದರು.ಇದೀಗ, ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ವಿರುದ್ಧ ಡಿಸಿಆರ್-ಇ ವಿಭಾಗದ ಎಸ್ಪಿ ಎಸ್.ಎಸ್. ಕಾಶಿ ನೀಡಿದ ದೂರಿನ ಕುರಿತು ಕೇಳಲಾದ ಪ್ರಶ್ನೆಗೆ ಡಿಜಿಪಿ ಪ್ರತಿಕ್ರಿಯೆ ನೀಡದೇ ಹೊರಟು ಹೋದರು. ಈ ಹಿನ್ನೆಲೆಯಲ್ಲಿ ವರ್ಗಾವಣೆ ವಿವಾದ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ತೆಗೆದುಕೊಳ್ಳುವ ಕ್ರಮಗಳತ್ತ ಗಮನ ಕೇಂದ್ರೀಕರಿಸಿದೆ.