



ಡೈಲಿವಾರ್ತೆ:22ಏಪ್ರಿಲ್ /2026

ಮಂಗಳೂರು: ಬಜಿಲಕರಿಯ ಎರಡು ಕುಟುಂಬಗಳ ನಡುವೆ ರಕ್ತರಂಜಿತ ಮಾರಾಮಾರಿ –
ಗಾಂಜಾ- ಹಣಕಾಸು ವೈಷಮ್ಯ ಶಂಕೆ.? ಪ್ರಕರಣ ದಾಖಲು

ಮಂಗಳೂರು, ಎಪ್ರಿಲ್ 22: ಕ್ಷುಲ್ಲಕ ವಿಚಾರದಿಂದ ಆರಂಭವಾದ ವೈಷಮ್ಯ ಗಂಭೀರ ಸ್ವರೂಪ ಪಡೆದು, ನಗರದ ಬಂದರು ಪೊಲೀಸ್ ಠಾಣೆ ವ್ಯಾಪ್ತಿಯ ಬಜಿಲಕರಿಯ ಪ್ರದೇಶದಲ್ಲಿ ಎರಡು ನೆರೆಮನೆಯ ಕುಟುಂಬಗಳ ನಡುವೆ ತಲವಾರು, ದೊಣ್ಣೆ ಹಾಗೂ ರಾಡುಗಳನ್ನು ಬಳಸಿಕೊಂಡು ನಡೆದ ಮಾರಾಮಾರಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ಹಾಡಹಗಲೇ ನಡೆದ ಈ ಘಟನೆದಲ್ಲಿ ಆರೋಪಿಗಳು ತಲವಾರು, ಕಲ್ಲು, ರಾಡುಗಳನ್ನು ಹಿಡಿದು ಪರಸ್ಪರ ಬೀದಿ ಜಗಳ ನಡೆಸಿರುವುದು ಗಮನಾರ್ಹವಾಗಿದೆ.
ಈ ಘಟನೆಯ ವಿಡಿಯೋವನ್ನು ಆರೋಪಿಗಳೇ ಚಿತ್ರೀಕರಿಸಿಕೊಂಡಿದ್ದು, ಬಳಿಕ ಅದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಸಂಬಂಧ ಎರಡೂ ಕುಟುಂಬಗಳು ಬಂದರು ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿಕೊಂಡಿದ್ದು, ಪರಸ್ಪರ ಜೀವ ಬೆದರಿಕೆ ಒಡ್ಡಿದ ಆರೋಪಗಳನ್ನೂ ಮಾಡಿದ್ದಾರೆ.
ಘಟನೆಯಲ್ಲಿ ಮಹಿಳೆ ಸೇರಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳಿಗೆ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅನಿತಾ (51) ನೀಡಿದ ದೂರಿನ ಮೇರೆಗೆ ಮಹೇಶ್ ಶೆಟ್ಟಿ, ಪ್ರೀತಂ ಶೆಟ್ಟಿ, ಮನೀಶ್ ಶೆಟ್ಟಿ ಹಾಗೂ ಜಿತೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಸುನಿತಾ ಶೆಟ್ಟಿ ನೀಡಿದ ದೂರಿನಂತೆ ತೇಜಸ್, ಲೋಕೇಶ್ ಹಾಗೂ ಅನಿತಾ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಬಂದರು ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) 115(2), 118(1), 351(3) ವಿಧಿಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಗಾಂಜಾ ವಹಿವಾಟು ಹಾಗೂ ಹಣಕಾಸು ವ್ಯವಹಾರಗಳ ಹಿನ್ನೆಲೆ ವೈಷಮ್ಯಕ್ಕೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.