



ಡೈಲಿವಾರ್ತೆ:23/ಏಪ್ರಿಲ್ /2026

ಬ್ರಹ್ಮಾವರ: ಹಲುವಳ್ಳಿಯಲ್ಲಿ ಸಡಗರದ ವರ್ತೆ ಪಂಜುರ್ಲಿ, ಬೈಕಾಡ್ತಿ ದೈವಗಳ ಸಿರಿ ಸಿಂಗಾರ ಕೋಲ ಸೇವೆ ಸಂಪನ್ನ

ಬ್ರಹ್ಮಾವರ, ಏಪ್ರಿಲ್ 23: ವರ್ತೆ ಪಂಜುರ್ಲಿ ಮತ್ತು ಬೈಕಾಡ್ತಿ ದೈವಗಳ ಸಿರಿ ಸಿಂಗಾರ ಕೋಲಾ ಸೇವೆಯು ಬುಧವಾರ ಹಲುವಳ್ಳಿಯ ಬಡಾಬೆಟ್ಟು ಮನೆಯಂಗಳದಲ್ಲಿ ಭಕ್ತಿಭಾವ ಹಾಗೂ ಸಂಪ್ರದಾಯದ ಸೊಬಗಿನ ನಡುವೆ ವಿಜೃಂಭಣೆಯಿಂದ ಜರುಗಿತು.

ಹುಬ್ಬಳ್ಳಿಯ ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾಗಿ ಗುರುತಿಸಿಕೊಂಡಿರುವ ಸುಗ್ಗಿ ಸುಧಾಕರ್ ಶೆಟ್ಟಿ ಹಾಗೂ ಅವರ ಕುಟುಂಬದವರು ಹಲವು ವರ್ಷಗಳಿಂದ ನಂಬಿಕೆ ಮತ್ತು ಭಕ್ತಿಯಿಂದ ಆರಾಧಿಸಿಕೊಂಡು ಬಂದಿರುವ ಈ ದೈವಕೋಲಾ ಸೇವೆ ಈ ಬಾರಿ ವಿಶೇಷ ವೈಭವ ಪಡೆದುಕೊಂಡಿತು.

ಕಾರ್ಯಕ್ರಮಕ್ಕೆ ಕೇಮಾರು ಮಠದ ಈಶವಿಠಲ ಸ್ವಾಮೀಜಿ ಆಗಮಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸೇರಿದಂತೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಮಂಗಳೂರಿನ ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ ಸೇರಿದಂತೆ ಅನೇಕ ಭಕ್ತರು ಮತ್ತು ಸುಧಾಕರ್ ಶೆಟ್ಟಿಯವರ ಅಭಿಮಾನಿ ವರ್ಗದವರು, ಊರಿನ ಸಮಸ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ರಾತ್ರಿ ಅನ್ನದಾನ ಕಾರ್ಯಕ್ರಮದ ಬಳಿಕ ವರ್ತೆ ಪಂಜುರ್ಲಿ ಮತ್ತು ಬೈಕಾಡ್ತಿ ದೈವಗಳ ಸಿರಿ ಸಿಂಗಾರ ಕೋಲಾ ಸೇವೆ ವಿಧಿವಿಧಾನಗಳೊಂದಿಗೆ ನೆರವೇರಿದ್ದು, ಭಕ್ತರಲ್ಲಿ ಆಧ್ಯಾತ್ಮಿಕ ಭಾವನೆ ಮೂಡಿಸಿತು.
ಸಂಪ್ರದಾಯಬದ್ಧ ಆಚರಣೆಗಳು ಮತ್ತು ಭಕ್ತರ ಭಾರೀ ಭಾಗವಹಿಸುವಿಕೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.