



ಕುಂದಾಪುರ: ಸಿದ್ಧಾಪುರ ಸರಸ್ವತಿ ವಿದ್ಯಾಲಯಕ್ಕೆ ಶೇ.100 ಫಲಿತಾಂಶದೊಂದಿಗೆ ರಾಜ್ಯಕ್ಕೆ 9, 10ನೇ ರ‍್ಯಾಂಕ್ ಕೀರ್ತಿ – ಸಾಧಕ ವಿದ್ಯಾರ್ಥಿನಿಯರಿಗೆ 25,000 ರೂ. ನಗದು ಪುರಾಸ್ಕರ

ಕುಂದಾಪುರ: ಬೈಂದೂರು ತಾಲೂಕಿನ ಸಿದ್ಧಾಪುರದಲ್ಲಿರುವ ಸುಮುಖ ಎಜ್ಯುಕೇಶನಲ್ ಟ್ರಸ್ಟ್ ವ್ಯಾಪ್ತಿಯ ಸರಸ್ಕೃತಿ ವಿದ್ಯಾಲಯ ಆಂಗ್ಲಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ಸಾಲಿನ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದು, ಶೇ.100 ಫಲಿತಾಂಶದೊಂದಿಗೆ ರಾಜ್ಯ ಮಟ್ಟದಲ್ಲಿ ಎರಡು ರ‍್ಯಾಂಕ್ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.


ಶುಕ್ರವಾರ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಅವರು ನಿರಂತರ ಅಧ್ಯಯನ ಅನುಭವಸಂಪನ್ನ ಆಡಳಿತ ಮಂಡಳಿ, ಸಮರ್ಪಿತ ಶಿಕ್ಷಕ ವೃಂದ ಮತ್ತು ಸುಸಜ್ಜಿತ ಸೌಲಭ್ಯಗಳೇ ಈ ಸಾಧನೆಗೆ ಕಾರಣ ಎಂದು ಹೇಳಿದರು. ಈ ವರ್ಷ ಒಟ್ಟು 35 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ. ಇವರಲ್ಲಿ 28 ಮಂದಿ ಡಿಸ್ಟಿಂಕ್ಷನ್ ಹಾಗೂ 7 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿನಿ ಶಿವಾನಿ ಶೆಟ್ಟಿ 617 ಅಂಕ (98.72%) ಗಳಿಸಿ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದಿದ್ದರೆ, ಆಯಿಷಾ ತನಾಝ್ 616 ಅಂಕ (98.56%) ಗಳಿಸಿ 10ನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ ಎಂದರು.
ಶಾಲೆಯ ಇತಿಹಾಸವನ್ನು ಸ್ಮರಿಸಿದ ಸುರೇಶ್ ಶೆಟ್ಟಿ: 2001ರಲ್ಲಿ ದಕ್ಕೇರಬಾಳು ಶ್ರೀ ಶ್ರೀನಿವಾಸ ಕಾಮತ್ ಅವರು ವೆಂಕಟರಮಣ ಎಜುಕೇಶನಲ್ ಟ್ರಸ್ಟ್ ಅಡಿಯಲ್ಲಿ ಈ ಶಾಲೆಯನ್ನು ಸ್ಥಾಪಿಸಿದ್ದು, 2025ರಲ್ಲಿ ಸುಮುಖ ಎಜ್ಯುಕೇಶನಲ್ ಟ್ರಸ್ಟ್ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ಸಾಧನೆ ಮಾಡಿದ ನಂತರವೇ ಸಮಾಜದ ಮುಂದೆ ಬರಬೇಕು ಎಂಬ ನಿಲುವಿನಿಂದಲೇ ಈವರೆಗೆ ಯಾವುದೇ ಪ್ರಚಾರ ಮಾಡಿರಲಿಲ್ಲ. ಇದೀಗ ನಮ್ಮ ವಿದ್ಯಾರ್ಥಿಗಳ ಸಾಧನೆಯೇ ನಮ್ಮ ಮಾತು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಸಾಧನೆಗೆ ಪೋಷಕರ ಸಹಕಾರ, ಶಿಕ್ಷಕರ ಸಮರ್ಪಣೆ ಹಾಗೂ ಹಾಸ್ಟೆಲ್ ವ್ಯವಸ್ಥೆ ಪ್ರಮುಖ ಕಾರಣವಾಗಿದೆ ಎಂದು ವಿವರಿಸಿದರು. ವಿಶೇಷವಾಗಿ ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಲ್ಲಿ ಇಟ್ಟು ಕ್ರಮಬದ್ಧ ತರಬೇತಿ ನೀಡಿದುದು ಉತ್ತಮ ಫಲಿತಾಂಶಕ್ಕೆ ದಾರಿ ಮಾಡಿಕೊಟ್ಟಿದೆ ಎಂದರು.
ಮುಂದಿನ ದಿನಗಳಲ್ಲಿ ಸಿಬಿಎಸ್ಸಿ ಪಠ್ಯಕ್ರಮ ಆರಂಭಿಸುವ ಜೊತೆಗೆ ಜೆಇಇ, ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ವ್ಯವಸ್ಥೆ
ಹಾಗೂ ಅಂತರಾಷ್ಟ್ರೀಯ ಉದ್ಯೋಗಾವಕಾಶಗಳ ದೃಷ್ಟಿಯಿಂದ ಜರ್ಮನ್ ಹಾಗೂ ಜಪಾನಿ ಭಾಷೆಗಳ ತರಬೇತಿಯನ್ನು ಆರನೇ ತರಗತಿಯಿಂದಲೇ ಆರಂಭಿಸುವ ಯೋಜನೆ, ರ‍್ಯಾಂಕ್ ವಿಜೇತರಿಗೆ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಯೋಜನೆ ಇದೆ ಎಂದು ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ರಾಜ್ಯ ಮಟ್ಟದ 9, 10ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿಯರಾದ ಶಿವಾನಿ ಶೆಟ್ಟಿ ಹಾಗೂ ಆಯಿಷಾ ತನಾಝ್ ಅವರಿಗೆ 25000 ರೂ. ನಗದು ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿಯರು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರ ನಿರಂತರ ಬೆಂಬಲವೇ ನಮ್ಮ ಸಾಧನೆಗೆ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜ್ಞಾನ ಸರಸ್ವತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಅಮರೇಶ್ ಕುಮಾರ್ ಹೆಗ್ಡೆ, ಸರಸ್ವತಿ ವಿದ್ಯಾಲಯದ ಮುಖ್ಯೋಪಾಧ್ಯಾಯನಿ ಶ್ವೇತ ಗಣೇಶ್, ಶಿಕ್ಷಕ ವೃಂದ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.