ಡೈಲಿವಾರ್ತೆ:24/ಏಪ್ರಿಲ್ /2026

ಕುಂದಾಪುರದಲ್ಲಿ ದೇವಸ್ಥಾನ ಕಾಣಿಕೆ ಹುಂಡಿ ಕಳವು ಪ್ರಕರಣ: ಹೆಲ್ಮೆಟ್ ಧರಿಸಿದ ದರೋಡೆಗಾರರ ಜಾಲ ಬಯಲು, ಇಬ್ಬರ ಬಂಧನ

ಕುಂದಾಪುರ, ಏಪ್ರಿಲ್ 24: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಕಾಣಿಕೆ ಹುಂಡಿ ಕಳವು ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತನಿಖೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏಪ್ರಿಲ್ 20, 2026ರಂದು ಬೆಳಿಗ್ಗೆ 7:56 ಗಂಟೆ ಸುಮಾರಿಗೆ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ದೇವಸ್ಥಾನದ ಹೊರ ಪೌಳಿಗೆ ಬಂದು ಕಾಣಿಕೆ ಹುಂಡಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಪ್ರಕರಣ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಹೆಚ್.ಡಿ. ಕುಲಕರ್ಣಿ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರಾದ ಸಂತೋಷ್ ಎ. ಕಾಯ್ಕಣಿ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಯಿತು. ಶಂಕರನಾರಾಯಣ ಠಾಣೆಯ ಪಿ.ಎಸ್.ಐ ಐ.ಆರ್. ಗಡ್ಡೇಕರ್, ಪಿ.ಎಸ್.ಐ ಅಕ್ಷಯ ಕುಮಾರಿ ಎಸ್.ಎನ್. ಸೇರಿದಂತೆ ಪೊಲೀಸ್ ಸಿಬ್ಬಂದಿಗಳ ತಂಡ ಶ್ರಮಪಟ್ಟು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದೆ.

ಬಂಧಿತ ಆರೋಪಿಗಳನ್ನು ಸಂದೀಪ್ ಆಚಾರಿ (28), ಮಠದಮನೆ, ಎಳಬೇರು, ಕಮಲಶಿಲೆ ಗ್ರಾಮ ಹಾಗೂ ಮುತ್ತಪ್ಪ ಶರಣಪ್ಪ ವಾಲಿಕರ್ (40), ಬನಹಟ್ಟಿ ಗ್ರಾಮ, ಕುಷ್ಟಗಿ ಎಂದು ಗುರುತಿಸಲಾಗಿದೆ. ಇವರನ್ನು ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ಬಂಧಿಸಲಾಗಿದೆ.

ಪೊಲೀಸರು ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಮೂರು ಮೊಬೈಲ್ ಫೋನ್‌ಗಳು ಮತ್ತು ಕಳವುಗೊಂಡ ಕಾಣಿಕೆ ಹುಂಡಿಯನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯವನ್ನು ಸುಮಾರು ರೂ. 1.50 ಲಕ್ಷ ಎಂದು ಅಂದಾಜಿಸಲಾಗಿದೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದೇವಸ್ಥಾನಗಳಲ್ಲಿ ಹೆಚ್ಚುತ್ತಿರುವ ಕಳವು ಪ್ರಕರಣಗಳಿಗೆ ತಡೆ ನೀಡಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.