



ಡೈಲಿವಾರ್ತೆ:25/ಏಪ್ರಿಲ್ /2026

ಮಣಿಪಾಲದ ನಡುರಸ್ತೆಯಲ್ಲಿ ಯುವಜೋಡಿ ಅಸಭ್ಯ ವರ್ತನೆ: ನಾಗರಿಕ ಸಮಾಜ ತಲೆತಗ್ಗಿಸುವಂತ ಘಟನೆ – ಸಾರ್ವಜನಿಕರ ಆಕ್ರೋಶ

ಉಡುಪಿ, ಏಪ್ರಿಲ್ 25: ವಿದ್ಯಾಕಾಶಿ ಎಂದೇ ಪ್ರಖ್ಯಾತವಾಗಿರುವ ಮಣಿಪಾಲದಲ್ಲಿ ಸಂಸ್ಕೃತಿ ಮತ್ತು ನೈತಿಕತೆಯ ಎಲ್ಲೆ ಮೀರುತ್ತಿರುವ ಆತಂಕಕಾರಿ ಬೆಳವಣಿಗೆಯೊಂದು ವರದಿಯಾಗಿದೆ.
ತಡರಾತ್ರಿ ಮಣಿಪಾಲದ ಸಾರ್ವಜನಿಕ ರಸ್ತೆಯಲ್ಲಿ ಯುವಕ-ಯುವತಿಯೊಬ್ಬರು ಅಸಭ್ಯವಾಗಿ ವರ್ತಿಸುವ ಮೂಲಕ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಮರೆತ ಈ ಜೋಡಿಯ ಪ್ರಣಯ ಸಲ್ಲಾಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಘಟನೆಯ ವಿವರ: ಮಣಿಪಾಲದ ಪ್ರಮುಖ ರಸ್ತೆಯೊಂದರಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ಯುವಕ ಮತ್ತು ಯುವತಿ ಸಾರ್ವಜನಿಕವಾಗಿ ಅತ್ಯಂತ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಕಂಡ ಸ್ಥಳೀಯರು ಹಾಗೂ ದಾರಿಹೋಕರು ತಕ್ಷಣವೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿದೇಶಿ ಸಂಸ್ಕೃತಿಯ ಅಂಧಾನುಕರಣೆಯಂತೆ ಕಂಡ ಈ ವರ್ತನೆಯು ಸುತ್ತಮುತ್ತಲಿನವರಲ್ಲಿ ಮುಜುಗರ ಹಾಗೂ ಆಕ್ರೋಶವನ್ನು ಉಂಟುಮಾಡಿತು.
ಹೈಟೆಕ್ ಸಂಸ್ಕೃತಿಯ ಕರಾಳ ಮುಖ? ದೇಶದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುವ ಮಣಿಪಾಲವು ಇಂದು ಹೈಟೆಕ್ ಕೇಂದ್ರವಾಗಿ ಬೆಳೆದಿದೆ. ಆದರೆ, ಈ ಹೈಟೆಕ್ ವಾತಾವರಣದ ಮರೆಯಲ್ಲಿ ಕೆಲ ಯುವಕ-ಯುವತಿಯರು ‘ವೈಯಕ್ತಿಕ ಸ್ವಾತಂತ್ರ್ಯ’ದ ಹೆಸರಿನಲ್ಲಿ ಸಾರ್ವಜನಿಕ ಶಿಸ್ತನ್ನು ಗಾಳಿಗೆ ತರುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿದೇಶಗಳಲ್ಲಿ ನಡೆಯುವ ಇಂತಹ ಘಟನೆಗಳು ನಮ್ಮೂರಿನ ಸಂಸ್ಕೃತಿಗೆ ಧಕ್ಕೆ ತರುತ್ತಿವೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಿಶೇಷವಾಗಿ ಹೊಸ ವರ್ಷಾಚರಣೆ ಹಾಗೂ ವ್ಯಾಲೆಂಟೈನ್ ಡೇಯಂತಹ ಸಂದರ್ಭಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಉಡುಪಿಗರ ನಿದ್ದೆಗೆಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕನಿಷ್ಠ ನಾಗರಿಕ ಪ್ರಜ್ಞೆ ಇಲ್ಲದೆ ವರ್ತಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.