ಡೈಲಿವಾರ್ತೆ:25/ಏಪ್ರಿಲ್ /2026

ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ಪ್ರವಾಸಿಗರ ಮೇಲೆ ಕಾಡಾನೆ ಅಟ್ಯಾಕ್ – ಮಹಿಳೆಗೆ ಗಾಯ

​ರಾಮನಗರ, ಏಪ್ರಿಲ್ 25: ಬೇಸಿಗೆಯ ಬಿಸಿಲಿನ ಬೇಗೆ ತಣಿಸಿಕೊಳ್ಳಲು ನದಿಗೆ ಇಳಿಯುವ ಪ್ರವಾಸಿಗರೇ ಎಚ್ಚರ! ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮೇಕೆದಾಟು ಬಳಿ ಕಾವೇರಿ ನದಿಯಲ್ಲಿ ಜಲಕ್ರೀಡೆಯಾಡುತ್ತಿದ್ದ ಪ್ರವಾಸಿಗರ ಮೇಲೆ ಒಂಟಿಸಲಗವೊಂದು ಏಕಾಏಕಿ ದಾಳಿ ನಡೆಸಿದ ಭೀಕರ ಘಟನೆ ನಡೆದಿದೆ.

ಕಾಡಾನೆಯ ರೌದ್ರಾವತಾರಕ್ಕೆ ಪ್ರವಾಸಿಗರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದು, ಓರ್ವ ಮಹಿಳೆ ಗಾಯಗೊಂಡ ಈ ಘಟನೆ ಕನಕಪುರ ತಾಲೂಕಿನ ಸಂಗಮ ಅರಣ್ಯ ವ್ಯಾಪ್ತಿಯ ಮೇಕೆದಾಟು ಬಳಿ ಶನಿವಾರ ಸಂಭವಿಸಿದೆ.

ಬೇಸಿಗೆ ರಜೆಯ ಹಿನ್ನೆಲೆ ನೂರಾರು ಪ್ರವಾಸಿಗರು ನದಿಯಲ್ಲಿ ಈಜಾಡುತ್ತಾ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಈ ವೇಳೆ ಕುಡಿಯುವ ನೀರಿಗಾಗಿ ಅರಣ್ಯದಿಂದ ನದಿಯತ್ತ ಬಂದ ಒಂಟಿಸಲಗ, ಅಲ್ಲಿದ್ದ ಜನರ ಗುಂಪನ್ನು ಕಂಡು ಕೆರಳಿದೆ. ಕ್ಷಣಾರ್ಧದಲ್ಲಿ ಆನೆಯು ಪ್ರವಾಸಿಗರ ಮೇಲೆರಗಿದ್ದು, ನೆರೆದಿದ್ದವರು ಎದ್ದೆನೋ ಬಿದ್ದೆನೋ ಎಂದು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ.​

ಮಹಿಳೆ ಮೇಲೆ ದಾಳಿ – ಪ್ರಾಣಾಪಾಯದಿಂದ ಪಾರು:​ಆನೆ ಬೆನ್ನಟ್ಟಿದ ಸಮಯದಲ್ಲಿ ಓರ್ವ ಮಹಿಳೆ ಕೆಳಗೆ ಬಿದ್ದಿದ್ದು, ಕಾಡಾನೆ ಅವರ ಮೇಲೆ ದಾಳಿ ಮಾಡಿದೆ. ಸುದೈವವಶಾತ್ ಮಹಿಳೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿ ನೆರವಿನೊಂದಿಗೆ ಗಾಯಾಳು ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ದಾಳಿಯ ನಂತರ ಕಾಡಾನೆಯು ಮರಳಿ ಅರಣ್ಯದೊಳಗೆ ತೆರಳಿದೆ.​​

ಪ್ರವಾಸಿಗರ ಮೇಲೆ ಆನೆರಗಿ ಬರುತ್ತಿದ್ದ ಈ ಭಯಾನಕ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅರಣ್ಯ ಪ್ರದೇಶದ ನದಿಗಳಿಗೆ ಇಳಿಯುವವರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.