



ಡೈಲಿವಾರ್ತೆ:25/ಏಪ್ರಿಲ್ /2026

ಬೈಂದೂರಿನ ಕುಖ್ಯಾತ ‘ಗರುಡ ಗ್ಯಾಂಗ್’ ಸದಸ್ಯ ಅಲ್ಫಾಜ್‌ಗೆ ಗೂಂಡಾ ಕಾಯ್ದೆ ಉರುಳು: ಜೈಲು ಪಾಲು

ಬೈಂದೂರು: ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರಣಿ ಅಪರಾಧ ಕೃತ್ಯಗಳ ಮೂಲಕ ಜನರಲ್ಲಿ ಭಯ ಹುಟ್ಟಿಸಿದ್ದ, ಬೈಂದೂರು ಪೊಲೀಸ್ ಠಾಣೆಯ ರೌಡಿಶೀಟರ್ ಹಾಗೂ ಕುಖ್ಯಾತ “ಗರುಡ ಗ್ಯಾಂಗ್” ಸಕ್ರಿಯ ಸದಸ್ಯ ಮಹಮ್ಮದ್ ಅಲ್ಫಾಜ್‌ನನ್ನು ಕೊನೆಗೂ ಗೂಂಡಾ ಕಾಯ್ದೆಯಡಿ (Goonda Act) ಬಂಧಿಸಿ ಜೈಲಿಗಟ್ಟಲಾಗಿದೆ.
ಜಿಲ್ಲಾಧಿಕಾರಿಗಳಿಂದ ಬಂಧನಕ್ಕೆ ಆದೇಶ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿದ ಸಮಗ್ರ ವರದಿಯನ್ನು ಆಧರಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಏಪ್ರಿಲ್ 24, 2026 ರಂದು ಈತನ ವಿರುದ್ಧ ಗೂಂಡಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಿದ್ದಾರೆ. ಸಮಾಜದ ಶಾಂತಿ ಹಾಗೂ ಸುಸ್ಥಿತಿಗೆ ಧಕ್ಕೆ ತರುತ್ತಿದ್ದ ಈತನ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಆರೋಪಿಯ ಹಿನ್ನೆಲೆ: ಬಂಧಿತ ಆರೋಪಿ ಮಹಮ್ಮದ್ ಅಲ್ಪಾಜ್ (25), ಕಿರಿಮಂಜೇಶ್ವರ ಗ್ರಾಮದ ಜನತಾ ಕಾಲೋನಿಯ ನಿವಾಸಿಯಾಗಿದ್ದು, ಪ್ರಸ್ತುತ ಕುಂದಾಪುರ ಕಸಬಾ ಗ್ರಾಮದಲ್ಲಿ ವಾಸವಿದ್ದನು. ಈತ ಬೈಂದೂರು ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದು, “ಗರುಡ ಗ್ಯಾಂಗ್” ಎನ್ನುವ ಕ್ರಿಮಿನಲ್ ತಂಡದ ಪ್ರಮುಖ ಸದಸ್ಯನಾಗಿ ಗುರುತಿಸಿಕೊಂಡಿದ್ದನು.10ಕ್ಕೂ ಹೆಚ್ಚು ಗಂಭೀರ ಪ್ರಕರಣಗಳು ಅಲ್ಫಾಜ್ ವಿರುದ್ಧ ಕೇವಲ ಉಡುಪಿ ಜಿಲ್ಲೆಯಲ್ಲದೆ, ನೆರೆಯ ಉತ್ತರ ಕನ್ನಡ ಜಿಲ್ಲೆಯಲ್ಲೂ ಪ್ರಕರಣಗಳು ದಾಖಲಾಗಿವೆ. ಶಿರ್ವಾ, ಗಂಗೊಳ್ಳಿ, ಬೈಂದೂರು, ಉಡುಪಿ ನಗರ, ಕುಂದಾಪುರ ಗ್ರಾಮಾಂತರ, ಕುಂದಾಪುರ ನಗರ ಹಾಗೂ ಭಟ್ಕಳ ನಗರ ಠಾಣೆಗಳಲ್ಲಿ 02 ಕೊಲೆಯತ್ನ ಪ್ರಕರಣಗಳು,02 ದರೋಡೆ ಮತ್ತು ದರೋಡೆ ಯತ್ನ ಪ್ರಕರಣಗಳು, 01ಅಪಹರಣ ಪ್ರಕರಣಗಳು, 01ಮಾದಕ ವಸ್ತು (Drugs) ಮಾರಾಟ ಪ್ರಕರಣ,ಹಲ್ಲೆ ಹಾಗೂ ಅಕ್ರಮ ಕೂಟ ಸೇರಿದಂತೆ ಒಟ್ಟು 10 ಪ್ರಕರಣಗಳು ದಾಖಲಾಗಿದ್ದು ಈ 10 ಪ್ರಕರಣಗಳ ಪೈಕಿ 8 ಪ್ರಕರಣಗಳು ಸದ್ಯ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, ಒಂದು ಪ್ರಕರಣ ತನಿಖೆಯಲ್ಲಿದೆ.
ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ರವಾನೆ: ಗೂಂಡಾ ಕಾಯ್ದೆಯಡಿ ಬಂಧಿಸಲ್ಪಟ್ಟ ಆರೋಪಿ ಅಲ್ಫಾಜ್‌ನನ್ನು ಮುಂದಿನ ಕಾನೂನು ಕ್ರಮಗಳಿಗಾಗಿ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಇರಿಸಲು ಅಧಿಕಾರಿಗಳು ಆದೇಶಿಸಿದ್ದಾರೆ.