ಡೈಲಿವಾರ್ತೆ:25/ಏಪ್ರಿಲ್ /2026

ಭಂಡಾರ ಮೆರವಣಿಗೆಯಲ್ಲಿ ದುರಂತ: ಕಲ್ಲಿನ ಸೇತುವೆ ಕುಸಿದು 8 ಮಂದಿಗೆ ತೀವ್ರ ಗಾಯ – ಧರ್ಮನೇಮ ಸ್ಥಗಿತ (ವಿಡಿಯೋ ವೈರಲ್)

ಮಂಗಳೂರು, ಎಪ್ರಿಲ್ 25: ದೈವಸ್ಥಾನದ ಭಂಡಾರ ಮೆರವಣಿಗೆ ವೇಳೆ ಹಳೆಯ ಕಲ್ಲಿನ ಸೇತುವೆ ಏಕಾಏಕಿ ಕುಸಿದು ಬಿದ್ದ ಪರಿಣಾಮ ಪಲ್ಲಕ್ಕಿ ಹೊತ್ತಿದ್ದ ಎಂಟು ಮಂದಿ ತೀವ್ರವಾಗಿ ಗಾಯಗೊಂಡ ದುರ್ಘಟನೆ ಮೂಡುಬಿದ್ರೆ ತಾಲೂಕಿನ ಪುಚ್ಚೆಮೊಗರು ಬಾವದಬೈಲು ಪ್ರದೇಶದಲ್ಲಿ ಸಂಭವಿಸಿದೆ.

ಪಡ್ಯಾರಬೆಟ್ಟು ಕಾರಣಿಕದ ಕೊಡಮಣಿತ್ತಾಯ ಕ್ಷೇತ್ರದ ಪ್ರತಿನಿಧಿ ಮುಕ್ಕಾಲ್ದಿ ಸುನಿಲ್ ಶೆಟ್ಟಿ ಅವರ ನೇತೃತ್ವದಲ್ಲಿ ಭಂಡಾರ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಪಲ್ಲಕ್ಕಿ ಹೊತ್ತಿದ್ದ ಸುನಿಲ್ ಶೆಟ್ಟಿ, ಲೋಕೇಶ್ ಭಂಡಾರಿ ಸೇರಿದಂತೆ ಒಟ್ಟು ಎಂಟು ಮಂದಿ ಸೊಂಟ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ತಾಕೋಡೆ ಪ್ರದೇಶದಲ್ಲಿ ನಡೆಯಲಿದ್ದ ಧರ್ಮನೇಮ ಕಾರ್ಯಕ್ರಮಕ್ಕಾಗಿ ದೈವದ ಆಭರಣಗಳನ್ನು ಪುಚ್ಚೆಮೊಗರಿನ ಭಂಡಾರ ಮನೆಯಿಂದ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ತರಲಾಗುತ್ತಿತ್ತು. ಕೊಂಬು ಮತ್ತು ಬ್ಯಾಂಡ್ ವಾದ್ಯಗಳ ಸದ್ದಿನ ನಡುವೆ ಭಕ್ತಿಭಾವದಿಂದ ಸಾಗುತ್ತಿದ್ದ ಮೆರವಣಿಗೆ ವೇಳೆ ಬಾವದಬೈಲಿನ ಹಳೆಯ ಕಲ್ಲಿನ ಸೇತುವೆ ಏಕಾಏಕಿ ಕುಸಿದು ಬಿದ್ದಿದೆ. ಘಟನೆಯ ವೇಳೆ ಪಲ್ಲಕ್ಕಿಯೊಂದಿಗೆ ಆಭರಣಗಳು ಉರುಳಿ ಬಿದ್ದಿದ್ದು, ಪಲ್ಲಕ್ಕಿ ಹೊತ್ತವರು ಸುಮಾರು ಹತ್ತು ಅಡಿ ಆಳದ ತೋಡಿಗೆ ಬಿದ್ದು ಗಾಯಗೊಂಡಿದ್ದಾರೆ.

ಬೇಸಿಗೆಯ ಹಿನ್ನೆಲೆ ತೋಡಿನಲ್ಲಿ ನೀರು ಇರದಿದ್ದರೂ, ಕಲ್ಲಿನ ಮೇಲೆ ಬಿದ್ದ ಪರಿಣಾಮ ಗಾಯಗಳ ತೀವ್ರತೆ ಹೆಚ್ಚಾಗಿದೆ. ಘಟನೆ ನಡೆಯುವ ಕ್ಷಣವನ್ನು ಮುಂದೆ ಸಾಗುತ್ತಿದ್ದವರ ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ಆ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪ್ರಾಥಮಿಕ ಪರಿಶೀಲನೆ ಪ್ರಕಾರ ಸೇತುವೆ ಸಮರ್ಪಕ ಬಲವರ್ಧನೆ ಇಲ್ಲದೆ ನಿರ್ಮಾಣಗೊಂಡಿದ್ದು, ಕಾಂಕ್ರೀಟ್ ಬೀಮ್ ಇಲ್ಲದ ಕಾರಣ ಭಾರ ತಡೆಯಲಾಗದೆ ಕುಸಿದಿರುವ ಸಾಧ್ಯತೆ ವ್ಯಕ್ತವಾಗಿದೆ. ದುರ್ಘಟನೆಯಿಂದ ಪಲ್ಲಕ್ಕಿಯಲ್ಲಿದ್ದ ಮೊಗಮೂರ್ತಿ ಹಾಗೂ ಇತರ ಪೂಜಾ ಸಾಮಗ್ರಿಗಳಿಗೆ ಹಾನಿಯಾಗಿದೆ. ಈ ಹಿನ್ನೆಲೆ ತಾಕೋಡೆ ಪ್ರದೇಶದಲ್ಲಿ ನಡೆಯಬೇಕಿದ್ದ ಧರ್ಮನೇಮ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸ್ಥಳೀಯರು ಮತ್ತು ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.