



ಡೈಲಿವಾರ್ತೆ:25/ಏಪ್ರಿಲ್ /2026

ಕಾರ್ಕಳ: ನಿಟ್ಟೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ವೇಗದ ಮೋಜಿಗೆ ಬಲಿಯಾಯ್ತು ಅಮಾಯಕ ಜೀವ – ಅಪ್ಪ ಸಾವು, ಮಗಳು ಸ್ಥಿತಿ ಗಂಭೀರ

ಕಾರ್ಕಳ, ಏಪ್ರಿಲ್ 25: ಕಾಲೇಜು ವಿದ್ಯಾರ್ಥಿಗಳ ಮಿತಿಮೀರಿದ ವೇಗ ಹಾಗೂ ಮೋಜು-ಮಸ್ತಿಗೆ ಮತ್ತೊಬ್ಬ ಅಮಾಯಕ ಜೀವ ಬಲಿಯಾದ ಘಟನೆ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿಟ್ಟೆ ಗ್ರಾಮದ ಹೋಟೆಲ್ ಒಂದರ ಮುಂಭಾಗ ಶನಿವಾರ ಸಂಭವಿಸಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಮೃತಪಟ್ಟು, ಮಗಳು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ವರದಿಯಾಗಿದೆ.
ಕಾರ್ಕಳ ನಿವಾಸಿ ನವೀನ್ ಚಂದ್ರ (45) ಅವರು ತಮ್ಮ ಪುತ್ರಿ ಪ್ರೇರಣಾಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ನಿಟ್ಟೆ ಕಡೆಯಿಂದ ಕಾರ್ಕಳಕ್ಕೆ ಬರುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರೊಂದು ನಿಯಂತ್ರಣ ತಪ್ಪಿ, ರಸ್ತೆಯ ಬದಿಗೆ ನುಗ್ಗಿ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಬೈಕ್ ನುಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡ ನವೀನ್ ಚಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಗಳು ಪ್ರೇರಣಾ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿದ್ಯಾರ್ಥಿಗಳ ವೇಗಕ್ಕೆ ಬಲಿಯಾದರೇ ಅಮಾಯಕರು?
ಅಪಘಾತ ಎಸಗಿದ ಕಾರಿನಲ್ಲಿದ್ದವರು ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿದ್ಯಾರ್ಥಿಗಳ ಅತಿವೇಗದ ಚಾಲನೆಯೇ ಈ ದುರಂತಕ್ಕೆ ನೇರ ಕಾರಣ ಎಂದು ತಿಳಿದು ಬಂದಿದೆ.ಇತ್ತೀಚಿನ ದಿನಗಳಲ್ಲಿ ನಿಟ್ಟೆ ಕಾಲೇಜು ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ನಿಯಮ ಮೀರಿ ವಾಹನ ಚಲಾಯಿಸುತ್ತಿದ್ದು, ಸಾರ್ವಜನಿಕರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹಳೆಯ ಘಟನೆಗಳ ಮೆಲುಕು – ಆಕ್ರೋಶದ ಕಟ್ಟೆ:
ಈ ಹಿಂದೆಯೂ ಅತ್ತೂರು ಮತ್ತು ಬೆಳ್ಳಣ್ ಪ್ರದೇಶಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಿಗೆ ಇದೇ ಕಾಲೇಜಿನ ವಿದ್ಯಾರ್ಥಿಗಳ ಬೇಜವಾಬ್ದಾರಿಯೇ ಕಾರಣವಾಗಿತ್ತು ಎಂದು ಸ್ಥಳೀಯರು ನೆನಪಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಮೋಜು-ಮಸ್ತಿಗೆ ಅಮಾಯಕ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಪೊಲೀಸರು ಮತ್ತು ಕಾಲೇಜು ಆಡಳಿತ ಮಂಡಳಿ ಇವರ ವೇಗಕ್ಕೆ ಕಡಿವಾಣ ಹಾಕದಿದ್ದರೆ ಇನ್ನಷ್ಟು ಜೀವಗಳು ಬಲಿಯಾಗಲಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಬಿಎನ್ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.