ಡೈಲಿವಾರ್ತೆ:25/ಏಪ್ರಿಲ್ /2026

ಆಲ್ದೂರು: ಭಾರೀ ಗಾಳಿ ಮಳೆ, ಹಲವು ಮನೆಗಳಿಗೆ ಹಾನಿ – SDPI ‍ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಮುಸ್ತಫ ಆಲ್ದೂರು ಭೇಟಿ

ಆಲ್ದೂರು: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೇಟೆ ಕಾಲೋನಿ ಹಾಗೂ ರೈಸ್ ಮಿಲ್ ರಸ್ತೆ ಪ್ರದೇಶದಲ್ಲಿ ಏಪ್ರಿಲ್ 24ರಂದು ಸಂಭವಿಸಿದ ಭಾರೀ ಗಾಳಿ ಮಳೆಗೆ ಹಲವು ಮನೆಗಳ ಮೇಲ್ಛಾವಣಿಯ ಶೀಟ್ ಮತ್ತು ಹಂಚುಗಳು ಹಾರಿ ಹೋಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ.

ಈ ಅನಿರೀಕ್ಷಿತ ದುರ್ಘಟನೆಯಿಂದಾಗಿ ಅನೇಕ ಕುಟುಂಬಗಳು ವಾಸಸ್ಥಳವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು. ಘಟನೆಯ ಮಾಹಿತಿ ತಿಳಿದ ತಕ್ಷಣ ಚಿಕ್ಕಮಗಳೂರು ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ಮುಸ್ತಫ ಆಲ್ದೂರು ಅವರು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದಾಗಿ ಬಡ ಕುಟುಂಬಗಳು ಬೀದಿಗೆ ಬಿದ್ದಿದ್ದು, ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಸಂತ್ರಸ್ತರಿಗೆ ತುರ್ತು ಪರಿಹಾರ ಹಾಗೂ ತಾತ್ಕಾಲಿಕ ನೆರವು ಒದಗಿಸಬೇಕೆಂದು ಒತ್ತಾಯಿಸಿದರು.

ಬಡವರ ಸಂಕಷ್ಟದ ಸಮಯದಲ್ಲಿ ಸರ್ಕಾರ ಮತ್ತು ಆಡಳಿತ ಯಂತ್ರವು ತ್ವರಿತವಾಗಿ ಸ್ಪಂದಿಸಬೇಕು. ಹಾನಿಗೊಳಗಾದ ಪ್ರತಿಯೊಂದು ಕುಟುಂಬಕ್ಕೂ ನ್ಯಾಯಸಮ್ಮತವಾದ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು. ಪರಿಶೀಲನೆಯ ವೇಳೆ ಸ್ಥಳೀಯ ಮುಖಂಡರು ಹಾಗೂ ಸಂತ್ರಸ್ತ ಕುಟುಂಬದವರು ಉಪಸ್ಥಿತರಿದ್ದರು.