



ಡೈಲಿವಾರ್ತೆ:26/ಏಪ್ರಿಲ್ /2026

ಕಾರ್ಕಳದಲ್ಲಿ ಮನೆ ಕಳವು ಪ್ರಕರಣ: 24 ಗಂಟೆಯೊಳಗೆ ಇಬ್ಬರ ಬಂಧನ, ಲಕ್ಷಾಂತರ ಮೌಲ್ಯದ ಚಿನ್ನ ವಶ

ಕಾರ್ಕಳ: ಕಾರ್ಕಳ ನಗರದಲ್ಲಿ ನಡೆದ ಮನೆ ಕಳವು ಪ್ರಕರಣವನ್ನು ಪೊಲೀಸರು ಶೀಘ್ರವೇ ಭೇದಿಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಕಳ ನಿವಾಸಿ ಶಂಕರ ಕುಲಾಲ್ ಅವರ ಮನೆಯಲ್ಲಿ ಕಳ್ಳರು ಪ್ರವೇಶಿಸಿ ಕಪಾಟಿನೊಳಗೆ ಇಡಲಾಗಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಕಳ್ಳರು ಸುಮಾರು 24 ಗ್ರಾಂ ತೂಕದ ಚಿನ್ನದ ನೆಕ್ಲಸ್, 3 ಗ್ರಾಂ ತೂಕದ ಮೂರು ಚಿನ್ನದ ಉಂಗುರಗಳು, 3 ಗ್ರಾಂ ತೂಕದ ಬೆಂಡೋಲೆ ಹಾಗೂ 3 ಗ್ರಾಂ ತೂಕದ ಜುಮ್ಕಿ ಸೇರಿದಂತೆ ಒಟ್ಟು ರೂ. 2,64,000 ಮೌಲ್ಯದ ಚಿನ್ನವನ್ನು ಕಳವು ಮಾಡಿರುವುದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಈ ಕುರಿತು ಶಂಕರ ಕುಲಾಲ್ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2026 ಅಡಿಯಲ್ಲಿ BNS 2023ರ ಕಲಂ 331(3), 331(4) ಹಾಗೂ 305 ಅನ್ವಯ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಕಾರ್ಕಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ ಅವರ ನೇತೃತ್ವದಲ್ಲಿ ಚುರುಕುಗೊಂಡ ಪೊಲೀಸರು, ಪ್ರಕರಣ ದಾಖಲಾದ 24 ಗಂಟೆಗಳೊಳಗೆ ಪ್ರಮುಖ ಆರೋಪಿ ಆನಂದ ಕುಲಾಲ್ (40) ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳವು ಮಾಡಿದ ಚಿನ್ನವನ್ನು ಖರೀದಿಸಿದ್ದ ಜಯರಾಮ ಆಚಾರ್ಯ (54) ಅವರನ್ನೂ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳಿಂದ ಒಟ್ಟು 39 ಗ್ರಾಂ ತೂಕದ, ಅಂದಾಜು ರೂ. 5,60,000 ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.ಪೊಲೀಸರ ಈ ವೇಗದ ಕಾರ್ಯಾಚರಣೆ ಸ್ಥಳೀಯರಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.