



ಡೈಲಿವಾರ್ತೆ:26/ಏಪ್ರಿಲ್ /2026

ಯಡಾಡಿ-ಮತ್ಯಾಡಿ ‘ಮಂಥನ-2026’ ಬೇಸಿಗೆ ಶಿಬಿರಕ್ಕೆ ಅದ್ಧೂರಿ ಚಾಲನೆ: ಅಂಕಗಳ ಓಟಕ್ಕಿಂತ ಜೀವನಪಾಠ ಮುಖ್ಯ: ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ರೂಪಿಸಿ – ನಟಿ ಶ್ರುತಿ

ಕುಂದಾಪುರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಕೇವಲ ಅಂಕ ಗಳಿಸುವ ಯಂತ್ರಗಳನ್ನಾಗಿ ನೋಡದೆ, ಅವರಿಗೆ ಉತ್ತಮ ಸಂಸ್ಕಾರ ನೀಡಿ ದೇಶದ ಶ್ರೇಷ್ಠ ಆಸ್ತಿಯನ್ನಾಗಿ ರೂಪಿಸುವುದು ಪೋಷಕರ ಮತ್ತು ಶಿಕ್ಷಕರ ಆದ್ಯತೆಯಾಗಬೇಕು ಎಂದು ಕನ್ನಡ ಚಿತ್ರರಂಗದ ಖ್ಯಾತ ನಟಿ ಶ್ರುತಿ ಕರೆ ನೀಡಿದರು.

ಯಡಾಡಿ-ಮತ್ಯಾಡಿಯ ಸುಜ್ಞಾನ ಪಿಯು ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆಶ್ರಯದಲ್ಲಿ ಏಪ್ರಿಲ್ 26 ರಿಂದ ಮೇ 02 ರವರೆಗೆ ಆಯೋಜಿಸಲಾದ ‘ಮಂಥನ-2026’ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು ಮಾತನಾಡಿದರು.
ಸಂಸ್ಕಾರಯುತ ಶಿಕ್ಷಣದ ಅಗತ್ಯತೆ: ತಮ್ಮ ಭಾಷಣದಲ್ಲಿ ಡಾ. ರಾಜ್‌ಕುಮಾರ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಉದಾಹರಣೆ ನೀಡಿದ ಶ್ರುತಿ, ಕೇವಲ ಶಾಲಾ ಶಿಕ್ಷಣ ಬದುಕನ್ನು ನಿರ್ಧರಿಸುವುದಿಲ್ಲ. ಅಪ್ಪಾಜಿ ಅವರು ಓದಿದ್ದು ನಾಲ್ಕನೇ ತರಗತಿಯಾದರೂ ಅವರ ಸಂಸ್ಕಾರ ಅವರನ್ನು ಸಾಂಸ್ಕೃತಿಕ ರಾಯಭಾರಿಯನ್ನಾಗಿ ಮಾಡಿತು. ವಿದ್ಯಾರ್ಥಿಗಳು ಅಂಕಗಳ ಬೆನ್ನತ್ತುವ ಬದಲು ವಿದ್ಯೆಯನ್ನು ಗೆಲ್ಲಬೇಕು ಎಂದರು. ಹಳ್ಳಿಯ ಭಾಗದ ಮಕ್ಕಳಿಗೆ ಉಚಿತವಾಗಿ ಅಕ್ಷರ ದಾಸೋಹ ಮತ್ತು ಸಾಂಸ್ಕೃತಿಕ ತರಬೇತಿ ನೀಡುತ್ತಿರುವ ಸುಜ್ಞಾನ ಸಂಸ್ಥೆಯ ಕಾರ್ಯವನ್ನು ಅವರು ಶ್ಲಾಘಿಸಿದರು.
ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆ ಪೂರಕ: ಕೆ. ಜಯಪ್ರಕಾಶ್ ಹೆಗ್ಡೆ

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಾಜಿ ಸಚಿವ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ ಅವರು ಶಿಕ್ಷಣದ ಜೊತೆಗೆ ಕ್ರೀಡೆ ಮತ್ತು ಕಲೆ ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಅತೀ ಅಗತ್ಯ. ಪೋಷಕರು ಮಕ್ಕಳ ಮೇಲೆ ಕೇವಲ ಓದಿನ ಒತ್ತಡ ಹೇರಬಾರದು. ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಡ್ರಗ್ಸ್ ಮತ್ತು ಆನ್‌ಲೈನ್ ಬೆಟ್ಟಿಂಗ್‌ನಂತಹ ದಾರಿ ತಪ್ಪಿಸುವ ಚಟಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ. ಪೋಷಕರು ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಟ್ಟು, ಅವರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು. ಅಲ್ಲದೆ, ಸಂವಿಧಾನದ ಆಶಯದಂತೆ ಸಮಾನತೆಯ ಮನೋಭಾವ ಬೆಳೆಸಿಕೊಳ್ಳಲು ಕರೆ ನೀಡಿದರು.
ಡಿಜಿಟಲ್ ಜಗತ್ತಿನಿಂದ ಮೈದಾನದತ್ತ ಸಾಗಿ: ಆನಂದ್ ಪಿ.

ಬೆಂಗಳೂರಿನ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಆನಂದ್ ಪಿ. ಮಾತನಾಡಿ ಮಕ್ಕಳು ಮೊಬೈಲ್ ಫೋನ್‌ಗಳಿಗೆ ಅಂಟಿಕೊಳ್ಳದೆ ಮೈದಾನಕ್ಕಿಳಿದು ನೈಜ ಜಗತ್ತಿನ ಅನುಭವ ಪಡೆಯಬೇಕು. ಕೇವಲ ಬುದ್ಧಿವಂತ ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಸಾಧನೆಯಲ್ಲ, ಸಾಮಾನ್ಯ ಅಂಕ ಪಡೆದ ವಿದ್ಯಾರ್ಥಿಯನ್ನು ಸಾಧಕನನ್ನಾಗಿ ರೂಪಿಸುವುದೇ ನಿಜವಾದ ಶಿಕ್ಷಣ ಎಂದರು.


ಇದೇ ಸಂದರ್ಭದಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಶ್ರುತಿ ಹಾಗೂ ಆನಂದ್ ಪಿ. ಅವರನ್ನು ಸನ್ಮಾನಿಸಲಾಯಿತು.
21 ವೈವಿಧ್ಯಮಯ ಚಟುವಟಿಕೆಗಳ ‘ಮಂಥನ’ ಡಾ. ರಮೇಶ್ ಶೆಟ್ಟಿ

ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅವರು ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ. ಈ ಬಾರಿ ಮುಂಬೈ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಒಂದು ವಾರದ ಶಿಬಿರದಲ್ಲಿ ಯಕ್ಷಗಾನ, ಕಂಬಳದ ಕೆಸರುಗದ್ದೆ ಆಟಗಳು, ಬೂಟ್ ಕ್ಯಾಂಪ್, ಕುಕ್ಕಿಂಗ್ ತರಬೇತಿ ಸೇರಿದಂತೆ 21ಕ್ಕೂ ಹೆಚ್ಚು ವಿಭಿನ್ನ ಚಟುವಟಿಕೆಗಳನ್ನು 50ಕ್ಕೂ ಹೆಚ್ಚು ತಜ್ಞರಿಂದ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಅಂತರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್, ಪಿ.ಡಬ್ಲ್ಯೂ.ಡಿ ಗುತ್ತಿಗೆದಾರ ಬಿ. ಅರುಣ್ ಕುಮಾರ್ ಹೆಗ್ಡೆ, ನೃತ್ಯ ಸಂಯೋಜಕ ರವಿ ಮಾಸ್ಟರ್, ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ ಉಪಸ್ಥಿತರಿದ್ದರು.
ಟ್ರಸ್ಟ್‌ನ ಕೋಶಾಧಿಕಾರಿ ಭರತ್ ಶೆಟ್ಟಿ ಪ್ರಾಸ್ತವಿಕ ಹಾಗೂ ಸ್ವಾಗತಿಸಿದರು.
ಶಿಕ್ಷಕ ವಿನಯ್ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲ ಬಿ. ನಿರಂಜನ್ ಶೆಟ್ಟಿ ವಂದಿಸಿದರು.