



ಡೈಲಿವಾರ್ತೆ:26/ಏಪ್ರಿಲ್ /2026

ಉಡುಪಿಯಲ್ಲಿ ಭೀಕರ ಅಗ್ನಿ ಅವಘಡ: ಸಿಟಿ ಬಸ್ ನಿಲ್ದಾಣ ಸಮೀಪ ಐದುಕ್ಕೂ ಹೆಚ್ಚು ಅಂಗಡಿಗಳು ಭಸ್ಮ

ಉಡುಪಿ: ನಗರದ ಸಿಟಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಖಾದರ್ ಬಿಲ್ಡಿಂಗ್‌ನಲ್ಲಿ ಭಾನುವಾರ ಸಂಭವಿಸಿದ ಭೀಕರ ಅಗ್ನಿ ಅವಘಡವು ವ್ಯಾಪಾರ ವಲಯದಲ್ಲಿ ಭಾರೀ ಆತಂಕವನ್ನುಂಟುಮಾಡಿದೆ.
ಏಕಾಏಕಿ ಹೊತ್ತಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಕವಾಗಿ ಹರಡಿಕೊಂಡು ಕನಿಷ್ಠ ಐದುಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ಸಂಪೂರ್ಣವಾಗಿ ಭಸ್ಮಗೊಳಿಸಿದೆ.
ಅಂಗಡಿಗಳಲ್ಲಿ ಕಾಣಿಸಿಕೊಂಡ ಬೆಂಕಿ ತೀವ್ರತೆಗೆ ತಕ್ಷಣವೇ ಪಕ್ಕದ ಮಳಿಗೆಗಳಿಗೂ ವ್ಯಾಪಕವಾಗಿ ಹಬ್ಬಿದ ಪರಿಣಾಮ ವ್ಯಾಪಾರಿಗಳಿಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯರು ತಮ್ಮ ಮಟ್ಟಿಗೆ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಬೆಂಕಿಯ ತೀವ್ರತೆಯ ಮುಂದೆ ಅವರ ಯತ್ನ ವಿಫಲವಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಡವಾಗಿ ಆಗಮಿಸುತ್ತಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಳಂಬವೇ ಬೆಂಕಿ ಇನ್ನಷ್ಟು ವ್ಯಾಪಿಸಲು ಕಾರಣವಾಯಿತೆಂಬ ಆರೋಪ ಕೇಳಿಬರುತ್ತಿದೆ.
ಸದ್ಯ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬೆಂಕಿ ನಿಯಂತ್ರಣಕ್ಕೆ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಘಟನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.