ಡೈಲಿವಾರ್ತೆ:30/ಏಪ್ರಿಲ್ /2026

ಅಂಕಗಳಿಗಿಂತ ಮಾನವೀಯ ಮೌಲ್ಯಗಳೇ ಬದುಕಿನ ಅಡಿಪಾಯ: ಶಾಸಕ ಕಿರಣ್ ಕುಮಾರ್ ಕೊಡ್ಗಿ​

ಕುಂದಾಪುರ: ವಿದ್ಯಾರ್ಥಿ ಜೀವನದಲ್ಲಿ ಕೇವಲ ಅಂಕಗಳಿಕೆಯಷ್ಟೇ ಅಂತಿಮ ಸಾಧನೆಯಲ್ಲ. ಸಮಾಜದಲ್ಲಿ ಹಿರಿಯರನ್ನು ಗೌರವಿಸುವ ಗುಣ ಹಾಗೂ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಒಬ್ಬ ವಿದ್ಯಾರ್ಥಿ ದೇಶದ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಕುಂದಾಪುರ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು.

ಇಲ್ಲಿನ ಮದರ್ ತೆರೆಸಾ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ “ಅಭ್ಯುದಯ” – ಎಸ್.ಎಸ್.ಎಲ್.ಸಿ. ಸಾಧಕ ವಿದ್ಯಾರ್ಥಿಗಳ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ​ಪೋಷಕರ ತ್ಯಾಗವೇ ಪ್ರೇರಣೆ​ಶಿಕ್ಷಣದಲ್ಲಿ ಪೋಷಕರ ಪಾತ್ರದ ಬಗ್ಗೆ ಒತ್ತಿ ಹೇಳಿದ ಶಾಸಕರು ಹಿಂದಿನ ಕಾಲದ ಕಡುಬಡತನದ ನಡುವೆಯೂ ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ಅವಿರತ ಶ್ರಮಿಸುತ್ತಿದ್ದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲೂ ಪೋಷಕರು ಮಕ್ಕಳ ಏಳಿಗೆಗಾಗಿ ಹಗಲಿರುಳು ತ್ಯಾಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಈ ಕಷ್ಟವನ್ನು ಎಂದಿಗೂ ಮರೆಯಬಾರದು. ಹೆತ್ತವರನ್ನು ಗೌರವದಿಂದ ನಡೆಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಮಾರ್ಮಿಕವಾಗಿ ನುಡಿದರು.

​ಶಿಕ್ಷಣ ಕ್ಷೇತ್ರದ ಸವಾಲುಗಳು​ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಪೈಪೋಟಿಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಶಾಸಕರು, ಶಿಕ್ಷಣ ಸಂಸ್ಥೆಗಳ ನಡುವಿನ ತೀವ್ರ ಸ್ಪರ್ಧೆಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಕುಸಿಯುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದರು. ಕುಂದಾಪುರ ಭಾಗದ ಹಳೆಯ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಇಂತಹ ಸವಾಲುಗಳ ನಡುವೆಯೂ ಖಾಸಗಿ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.​

ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಪ್ರೀತಮ್ ಜಿ. ಪೂಜಾರಿ ಹಾಗೂ ಇತರ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.​

ಶಿಸ್ತು ಮತ್ತು ಪರಿಪೂರ್ಣತೆ ಮುಖ್ಯಅಶೋಕ್ ಕಾಮತ್: ​ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಅಶೋಕ್ ಕಾಮತ್ ಮಾತನಾಡಿ, ಜೀವನದಲ್ಲಿ ಸಾಧನೆಯ ಶಿಖರಕ್ಕೇರಲು ಶಿಸ್ತು ಮತ್ತು ಪರಿಪೂರ್ಣತೆಯ ಹಂಬಲ ಮುಖ್ಯ. ಸಾಧನೆಯನ್ನು ಗುರುತಿಸಿ ನೀಡುವ ಪ್ರೋತ್ಸಾಹವು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಉತ್ಸಾಹ ತುಂಬುತ್ತದೆ ಎಂದರು. ಅಲ್ಲದೆ, ಉಡುಪಿ ಜಿಲ್ಲೆಯು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.​

ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಲೋಕೇಶ್ ಸಿ. ಮಾತನಾಡಿ, 1988ರಿಂದ ಈವರೆಗೆ ಜಿಲ್ಲೆಯಲ್ಲಿ ಯಾರೂ ಮಾಡದ 625 ಅಂಕಗಳ ಐತಿಹಾಸಿಕ ಸಾಧನೆಯನ್ನು ಪ್ರೀತಮ್ ಪೂಜಾರಿ ಮಾಡಿದ್ದಾರೆ. ಶಿಕ್ಷಕರ ಬದ್ಧತೆಯೇ ಜಿಲ್ಲೆಯ ಈ ಯಶಸ್ಸಿಗೆ ಕಾರಣ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರಾದ ರೆನಿಟಾ ಲೋಬೋ ಹಾಗೂ ಕು.ಶಮಿತಾರಾವ್‌ ವಹಿಸಿದ್ದರು. ಕು.ಶಮಿತಾರಾವ್‌ ಮಾತನಾಡಿ 1998ರಲ್ಲಿ ಕೇವಲ 12 ಮಕ್ಕಳಿಂದ ಆರಂಭವಾದ ಈ ಸಂಸ್ಥೆ ಇಂದು ಈ ಮಟ್ಟಕ್ಕೆ ಬೆಳೆಯಲು ಶಿಕ್ಷಕರ ಕಠಿಣ ಪರಿಶ್ರಮ ಮತ್ತು ನಿಷ್ಠೆಯೇ ಕಾರಣ ಎಂದರು.​

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಶೋಭಾ ಶೆಟ್ಟಿ, ಪ್ರಿನ್ಸಿಪಾಲ್ ಜಾಯ್ಸನ್ ಮತ್ತಿತರರು ಉಪಸ್ಥಿತರಿದ್ದರು. ರಸಾಯನ ಶಾಸ್ತ್ರ ಶಿಕ್ಷಕ ಮಂಜುನಾಥ ಬಾಯರಿ ಸ್ವಾಗತಿಸಿ, ಸಂತೋಷ್ ಕುಮಾರ್ ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ವೈಶಾಲಿ ಶೆಟ್ಟಿ ಹಾಗೂ ಅಲಿಟಾ ಡೇಸಾ ಕಾರ್ಯಕ್ರಮ ನಿರೂಪಿಸಿದರು