



ಡೈಲಿವಾರ್ತೆ:30/ಏಪ್ರಿಲ್ /2026

ಬೆಂಗಳೂರಿನಲ್ಲಿ ಮಳೆರಾಯನ ಮೃತ್ಯು ನರ್ತನ: ವರುಣನ ಅಬ್ಬರಕ್ಕೆ ಹತ್ತು ಜೀವಗಳು ಬಲಿ – ತಾಯಿಯ ಕಣ್ಣೆದುರೇ ಪ್ರಾಣಬಿಟ್ಟ 17 ವರ್ಷದ ಮಗ

ಬೆಂಗಳೂರು: ತಿಂಗಳಿನಿಂದ ಸುಡುತ್ತಿದ್ದ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆಯಲು ಬಂದ ಮಳೆರಾಯ, ಅಕ್ಷರಶಃ ಮೃತ್ಯುರೂಪಿಯಾಗಿ ಅಪ್ಪಳಿಸಿದ್ದಾನೆ. ಕೇವಲ ಅರ್ಧ ಗಂಟೆಯ ಅಬ್ಬರಕ್ಕೆ ನಗರದ ವಿವಿಧೆಡೆ ಸಂಭವಿಸಿದ ದುರಂತಗಳಲ್ಲಿ ಹತ್ತು ಮಂದಿ ಅಸುನೀಗಿದ್ದಾರೆ.

ಒಂದೆಡೆ ಗೋಡೆ ಕುಸಿದು ಏಳು ಮಂದಿ ಪ್ರಾಣ ಕಳೆದುಕೊಂಡರೆ, ವಿದ್ಯುತ್ ಸ್ಪರ್ಶ ಹಾಗೂ ಸಿಮೆಂಟ್ ಶೀಟ್ ಬಿದ್ದ ಪರಿಣಾಮ ಉಳಿದ ಮೂವರು ಸಾವನ್ನಪ್ಪಿದ್ದಾರೆ. ಇದು ನಗರದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುವಂತಾಗಿದೆ.

ಬೌರಿಂಗ್ ಆಸ್ಪತ್ರೆ ಬಳಿ ಸಂಭವಿಸಿದ ಮಹಾ ದುರಂತ: ನಗರದ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಶವಗಾರದ ಬಳಿ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಳೆಯ ತೀವ್ರತೆಗೆ ಜರ್ಜರಿತವಾಗಿದ್ದ ಗೋಡೆ ಏಕಾಏಕಿ ಕುಸಿದಿದ್ದೇ ಈ ಸಾವು-ನೋವಿಗೆ ಕಾರಣವಾಯಿತು.

ದುರಂತದ ಸರಣಿ ಇಷ್ಟಕ್ಕೇ ನಿಲ್ಲಲಿಲ್ಲ; ಗೋಡೆ ಕುಸಿತದ ರಭಸಕ್ಕೆ ಸಮೀಪದ ಬೆಸ್ಕಾಂ ವಿದ್ಯುತ್ ಕಂಬ ಜಖಂಗೊಂಡು ತಂತಿಗಳು ಹರಿದು ಬಿದ್ದಿವೆ. ಇದೇ ವೇಳೆ ತಾಯಿಯೊಂದಿಗೆ ಬಟ್ಟೆ ಖರೀದಿಗೆ ಬಂದಿದ್ದ ಕೆ.ಜಿ. ಹಳ್ಳಿಯ 17 ವರ್ಷದ ಬಾಲಕ ಸೈಯದ್ ಸೂಫಿಯಾನ್, ವಾಹನ ಪಾರ್ಕ್ ಮಾಡಲು ಹೋದಾಗ ವಿದ್ಯುತ್ ತಂತಿ ತಗುಲಿ ತಾಯಿಯ ಕಣ್ಣೆದುರೇ ಪ್ರಾಣ ಬಿಟ್ಟಿದ್ದಾನೆ. ಮಗನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ತಾಯಿ ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತ್ಯೇಕ ಘಟನೆಗಳಲ್ಲಿ ಇಬ್ಬರ ಸಾವುಮೈಸೂರು ರಸ್ತೆ: ಕಸ್ತೂರಿ ಬಾಯಿನಗರದ ಅಶ್ವತ್ ಕಟ್ಟೆ ರಸ್ತೆಯ ನಿವಾಸಿ ಮಂಜು (35) ಎಂಬುವವರ ಮೇಲೆ ಗೋಡೌನ್‌ನಿಂದ ಹಾರಿ ಬಂದ ಸಿಮೆಂಟ್ ಶೀಟ್ ಬಿದ್ದ ಪರಿಣಾಮ ಅವರು ಮನೆಯೊಳಗೇ ಮೃತಪಟ್ಟಿದ್ದಾರೆ. ಬಿರುಗಾಳಿಯ ಆರ್ಭಟಕ್ಕೆ ಗೋಡೌನ್ ಶೀಟ್‌ಗಳು ಹಾರಿಹೋಗಿ ಹಲವು ಮನೆಗಳಿಗೆ ಹಾನಿಯಾಗಿದೆ.
ಜೆ.ಪಿ. ನಗರ: ಸಾರಕ್ಕಿ ಬಸ್ ನಿಲ್ದಾಣದ ಬಳಿ ವಿದ್ಯುತ್ ಕಂಬದ ಪಕ್ಕ ನಿಂತಿದ್ದ ಜೆ.ಡಿ. ಮಾರಾ ಸ್ಲಂ ನಿವಾಸಿ ರಘು (35) ಎಂಬುವವರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
25 ವರ್ಷಗಳ ದಾಖಲೆ ಮುರಿದ ಮಳೆಬುಧವಾರ ನಗರದಲ್ಲಿ ಬರೋಬ್ಬರಿ 111 ಮಿ.ಮೀ ಮಳೆಯಾಗಿದ್ದು, ಇದು ಕಳೆದ 25 ವರ್ಷಗಳಲ್ಲೇ ದಾಖಲಾದ ಗರಿಷ್ಠ ಮಳೆಯಾಗಿದೆ. ಈ ಹಿಂದೆ 2001ರಲ್ಲಿ 118 ಮಿ.ಮೀ ಮಳೆಯಾಗಿತ್ತು. ಅಂದಿನ ದಾಖಲೆಯನ್ನು ಸರಿಗಟ್ಟುವಂತೆ ಸುರಿದ ಈ ಮಳೆ, ನಗರದ ಮೂಲಸೌಕರ್ಯದ ವೈಫಲ್ಯವನ್ನು ಬೆತ್ತಲೆ ಮಾಡಿದೆ.