



ಡೈಲಿವಾರ್ತೆ:30/ಏಪ್ರಿಲ್ /2026

ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳುತ್ತಿದ್ದ ವರ ಅಪಘಾತದಲ್ಲಿ ಸಾವು: ನುಚ್ಚುನೂರಾದ ಮದುವೆಯ ಕನಸುಗಳು, ಕಣ್ಣೀರಲ್ಲಿ ಮುಳುಗಿದ ಕುಟುಂಬ!

ಹಾಸನ: ಮದುವೆ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ವಿಧಿಯ ಆಟ ಭೀಕರವಾಗಿ ಪರಿಣಮಿಸಿದೆ. ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ಗಾಗಿ ವಧುವನ್ನು ಕರೆತರಲು ತೆರಳುತ್ತಿದ್ದ ವರ ಕಾರು ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಬಳಿ ಗುರುವಾರ ಸಂಭವಿಸಿದೆ.

ಘಟನೆಯ ವಿವರ: ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿ ಮನು ಎಲ್.ಎನ್. (29) ಮೃತಪಟ್ಟ ದುರ್ದೈವಿ.
ಮನು ಅವರಿಗೆ ಮೇ 10 ರಂದು ಆಲೂರು ತಾಲೂಕಿನ ತೊಗರನಹಳ್ಳಿ ಗ್ರಾಮದ ಕಾಂಚನ ಎಂಬುವವರ ಜೊತೆ ವಿವಾಹ ನಿಗದಿಯಾಗಿತ್ತು. ಆಲೂರು ಬೈರಾಪುರ ರಸ್ತೆಯಲ್ಲಿರುವ ಶ್ರೀ ವೀರಶೈವ ಕಲ್ಯಾಣ ಮಂಟಪದಲ್ಲಿ ಮದುವೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದವು.ಇಂದು ಬೆಳಿಗ್ಗೆ ಮನು ಅವರು ಪ್ರೀ ವೆಡ್ಡಿಂಗ್ ಶೂಟಿಂಗ್ ಹಮ್ಮಿಕೊಂಡಿದ್ದರು. ಇದಕ್ಕಾಗಿ ವಧುವನ್ನು ಕರೆತರಲು ತಮ್ಮ ‘ವಿಟಾರಾ ಬ್ರಿಝಾ’ ಕಾರಿನಲ್ಲಿ ಒಬ್ಬರೇ ಹೊರಟಿದ್ದರು. ಆದರೆ, ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಬಳಿ ತಲುಪುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ನುಜ್ಜುಗುಜ್ಜಾಗಿದ್ದು, ಮನು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕನಸುಗಳೆಲ್ಲ ನುಚ್ಚುನೂರು: ಮದುವೆಗೆ ಇನ್ನು ಕೇವಲ ಹತ್ತು ದಿನಗಳ ಬಾಕಿ ಇರುವಾಗ ನಡೆದ ಈ ಅವಘಡ ಎರಡೂ ಕುಟುಂಬಗಳನ್ನು ಆಘಾತಕ್ಕೀಡು ಮಾಡಿದೆ. ಮದುವೆಯ ಸಡಗರದಲ್ಲಿದ್ದ ಮನೆಗಳಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ. ಹಸೆಮಣೆ ಏರಬೇಕಿದ್ದ ಯುವಕ ಚಿರನಿದ್ರೆಗೆ ಶರಣಾಗಿರುವುದು ಗ್ರಾಮಸ್ಥರಲ್ಲಿ ತೀವ್ರ ವಿಷಾದ ಮೂಡಿಸಿದೆ.
ಘಟನಾ ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.