



ಡೈಲಿವಾರ್ತೆ:30/ಏಪ್ರಿಲ್ /2026

ಕುಂದಾಪುರ: ಜಾಗದ ವಿವಾದದ ಕಿಡಿ – ದಂಪತಿ ಮೇಲೆ ಹಲ್ಲೆ ಹಾಗೂ ಜೀವ ಬೆದರಿಕೆ – ಇಬ್ಬರ ವಿರುದ್ಧ ಪ್ರಕರಣ ದಾಖಲು

ಕುಂದಾಪುರ: ಇಲ್ಲಿನ ತಲ್ಲೂರು ಗ್ರಾಮದ ಸುಪ್ರಿಂ ಟೈಲ್ಸ್ ಫ್ಯಾಕ್ಟರಿ ಬಳಿ ಜಾಗದ ವಿಚಾರವಾಗಿ ಉಂಟಾದ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ, ದಂಪತಿಗಳ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಗಂಭೀರ ಘಟನೆ ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ವಿವಿಧ ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.
ಘಟನೆಯ ಹಿನ್ನೆಲೆ: ಫಿರ್ಯಾದಿದಾರರಾದ ಕಸಬಾ ಗ್ರಾಮದ ನಿವಾಸಿ ಶಬರಿ ಸತೀಶ್ ಶೆಟ್ಟಿ (37) ಅವರಿಗೆ ಸೇರಿದ ತಲ್ಲೂರು ಗ್ರಾಮದ ಸರ್ವೆ ನಂಬ್ರ 111/13, 14, 15 ರ ಜಾಗದ ಬಾವಿಯಿಂದ ಸುಪ್ರಿಂ ಟೈಲ್ಸ್ ಫ್ಯಾಕ್ಟರಿಗೆ ನೀರು ಸರಬರಾಜು ಮಾಡಲು ಪಂಪ್ ಸೆಟ್ ಅಳವಡಿಸಲಾಗಿತ್ತು. ದಿನಾಂಕ 18/04/2026 ರಂದು ಕಾರ್ಖಾನೆಯ ಕೆಲಸಕ್ಕಾಗಿ ಆರೋಪಿ ಜಯಕರ ಶೆಟ್ಟಿ ಅವರು ನೀರು ಕೇಳಿದಾಗ, ಮಾನವೀಯತೆಯ ದೃಷ್ಟಿಯಿಂದ ಶಬರಿ ಅವರು ಶೆಡ್ಡ್‌ನ ಬೀಗದ ಕೀ ಗೊಂಚಲನ್ನು ನೀಡಿದ್ದರು.
ದಿನಾಂಕ 29/04/2026 ರಂದು ಮಧ್ಯಾಹ್ನ ಶಬರಿ ಶೆಟ್ಟಿ ಮತ್ತು ಅವರ ಪತಿ ಸತೀಶ್ ಶೆಟ್ಟಿ ಅವರು ನೀಡಿದ್ದ ಕೀಯನ್ನು ವಾಪಸ್ ಪಡೆಯಲು ಕಾರ್ಖಾನೆಗೆ ತೆರಳಿದಾಗ ಸಂಘರ್ಷ ಆರಂಭವಾಗಿದೆ. ಕೀ ಕೇಳಿದ ದಂಪತಿಯನ್ನು ಆರೋಪಿ ಜಯಕರ ಶೆಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅಲ್ಲಿಯೇ ಮೇಜಿನ ಮೇಲಿದ್ದ ಕೀ ಗೊಂಚಲನ್ನು ಶಬರಿ ಅವರು ತಮ್ಮದೆಂದು ಭಾವಿಸಿ ತೆಗೆದುಕೊಳ್ಳಲು ಹೋದಾಗ ಗಂಭೀರ ಸ್ವರೂಪದ ಜೀವ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.ದಂಪತಿಗಳು ಅಲ್ಲಿಂದ ನಿರ್ಗಮಿಸಲು ಕಾರಿನ ಬಳಿ ಹೋದಾಗ, ಮತ್ತೊಬ್ಬ ಆರೋಪಿ ಬೀರೇಂದ್ರ ಶೆಟ್ಟಿ ಕಾರಿನ ಡೋರು ಹಾಕದಂತೆ ತಡೆದು ಅಡ್ಡಗಟ್ಟಿದ್ದಾರೆ. ಈ ವೇಳೆ ಪತಿ ಸತೀಶ್ ಶೆಟ್ಟಿ ಅವರ ಕುತ್ತಿಗೆಯನ್ನು ಒತ್ತಿ ಹಿಡಿದು ಹಲ್ಲೆ ನಡೆಸಲಾಗಿದ್ದು, ಇದನ್ನು ಬಿಡಿಸಲು ಹೋದ ಶಬರಿ ಶೆಟ್ಟಿ ಅವರಿಗೂ ಹೊಡೆದು ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಫಿರ್ಯಾದಿದಾರರು ಟೈಲ್ಸ್ ಫ್ಯಾಕ್ಟರಿ ಬಳಿಯ ಜಾಗವನ್ನು ಖರೀದಿಸಿದ್ದು ಮತ್ತು ಆ ಜಾಗದಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್ ಅಳವಡಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಈ ಕಿತ್ತಾಟಕ್ಕೆ ಮೂಲ ಕಾರಣ ಎನ್ನಲಾಗಿದೆ. ಈ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಆರೋಪಿಗಳು ದಂಪತಿಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ಸಂತ್ರಸ್ತೆಯ ದೂರಿನ ಮೇರೆಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026 ರಂತೆ, ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 126(2) (ಅಕ್ರಮ ತಡೆ), 74 (ಮಹಿಳೆಯ ಘನತೆಗೆ ಧಕ್ಕೆ), 352(1) (ಜೀವ ಬೆದರಿಕೆ), 115(2) (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.