ಡೈಲಿವಾರ್ತೆ:30/ಏಪ್ರಿಲ್ /2026

ಮಲ್ಪೆ ಬಂದರಿನಲ್ಲಿ ಮತ್ಸೋದ್ಯಮಿಗಳ ರಣಾಂಗಣ: ಕೋಟ್ಯಾಂತರ ರೂ. ವ್ಯವಹಾರಕ್ಕಾಗಿ ನಡುರಸ್ತೆಯಲ್ಲಿ ಹೊಡೆದಾಟ: ಆಸ್ಪತ್ರೆಗೂ ನುಗ್ಗಿ ಹಲ್ಲೆ!

ಉಡುಪಿ: ಕರಾವಳಿಯ ಪ್ರಮುಖ ಮೀನುಗಾರಿಕಾ ಕೇಂದ್ರವಾದ ಮಲ್ಪೆ ಬಂದರು ಗುರುವಾರ ಮತ್ಸೋದ್ಯಮಿಗಳ ನಡುವಿನ ಭೀಕರ ಸಂಘರ್ಷಕ್ಕೆ ಸಾಕ್ಷಿಯಾಗಿದೆ.

ಕೋಟ್ಯಾಂತರ ರೂಪಾಯಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಉದ್ಯಮಿಗಳ ನಡುವೆ ನಡೆದ ಜಗಳ, ಸಾರ್ವಜನಿಕವಾಗಿ ಹೊಡೆದಾಟಕ್ಕೆ ತಿರುಗಿದ್ದು, ಆಸ್ಪತ್ರೆಯ ಆವರಣದವರೆಗೂ ವ್ಯಾಪಿಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ವ್ಯವಹಾರದ ಕಿಡಿ; ಸಾರ್ವಜನಿಕವಾಗಿ ಹಲ್ಲೆ
​ಮಾಹಿತಿಗಳ ಪ್ರಕಾರ, ಬೋಟ್ ಮಾಲೀಕ ಛೋಟಾ ಹರೀಶ್ ಮತ್ತು ಜಯೇಶ್ ಕೋಟ್ಯಾನ್ ನಡುವೆ ಕೋಟ್ಯಾಂತರ ರೂಪಾಯಿಗಳ ಬಾಕಿ ಹಣದ ವಿಚಾರವಾಗಿ ದೀರ್ಘಕಾಲದ ಭಿನ್ನಾಭಿಪ್ರಾಯವಿತ್ತು. ಗುರುವಾರ ಈ ವಿಷಯವಾಗಿ ಮಲ್ಪೆ ಬಂದರಿನಲ್ಲಿ ಮಾತಿನ ಚಕಮಕಿ ನಡೆದಿದ್ದು, ತಾರಕಕ್ಕೇರಿದೆ. ಈ ವೇಳೆ ಜಯೇಶ್ ಕೋಟ್ಯಾನ್ ಎಂಬಾತ ಹರೀಶ್ ಮೇಲೆ ಸಾರ್ವಜನಿಕವಾಗಿಯೇ ಹಲ್ಲೆ ನಡೆಸಿದ್ದು, ಇಬ್ಬರ ನಡುವೆ ತೀವ್ರ ಸ್ವರೂಪದ ಹೊಡೆದಾಟ ನಡೆದಿದೆ ಎಂದು ತಿಳಿದುಬಂದಿದೆ.

ಆಸ್ಪತ್ರೆಗೂ ಹಬ್ಬಿದ ಸಂಘರ್ಷದ ಬಿಸಿ:
​ಬಂದರಿನಲ್ಲಿ ನಡೆದ ಘರ್ಷಣೆಯಿಂದ ಗಾಯಗೊಂಡ ಇಬ್ಬರೂ ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ವೈಷಮ್ಯ ಇಲ್ಲಿಗೆ ನಿಂತಿಲ್ಲ. ಚಿಕಿತ್ಸೆ ಪಡೆಯುತ್ತಿದ್ದ ಜಯೇಶ್ ಕೋಟ್ಯಾನ್ ಮೇಲೆ ಹರೀಶ್‌ನ ಬೆಂಬಲಿಗರು ಎನ್ನಲಾದ ನಾಲ್ವರು ವ್ಯಕ್ತಿಗಳು ಆಸ್ಪತ್ರೆ ಆವರಣಕ್ಕೆ ನುಗ್ಗಿ ಮತ್ತೊಮ್ಮೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ನಡೆದ ಈ ಅನಿರೀಕ್ಷಿತ ದಾಳಿಯಿಂದ ರೋಗಿಗಳು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ. ದಾಳಿ ನಡೆಸಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಮಲ್ಪೆ ಠಾಣಾ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಬಂದರಿನಲ್ಲಿ ನಡೆದ ಹೊಡೆದಾಟ ಮತ್ತು ಆಸ್ಪತ್ರೆಯಲ್ಲಿ ನಡೆದ ದಾಳಿಯ ಕುರಿತು ತನಿಖೆ ಚುರುಕುಗೊಳಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.