ಡೈಲಿವಾರ್ತೆ:30/ಏಪ್ರಿಲ್ /2026

ವರದಕ್ಷಿಣೆ ಕಿರುಕುಳ, ಕೊಲೆ ಯತ್ನ: ಸಿದ್ದಾಪುರದಲ್ಲಿ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಎಫ್.ಐ.ಆರ್. ದಾಖಲು​

ಸಿದ್ದಾಪುರ: ವಿವಾಹವಾದ ಕೆಲವೇ ವರ್ಷಗಳಲ್ಲಿ ವರದಕ್ಷಿಣೆಗಾಗಿ ವಿವಾಹಿತೆಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುವುದಲ್ಲದೆ, ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಭೀಕರ ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ನೆಜ್ಜೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಸಂತ್ರಸ್ತೆ ಶಾಝೀನ್ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪತಿ ಹಾಗೂ ಆತನ ಕುಟುಂಬದ ಐವರ ವಿರುದ್ಧ ಗಂಭೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ: ​ದೂರುದಾರೆ ಶಾಝೀನ್ ಮತ್ತು ಮುಬಾರಕ್ ಸಯ್ಯದ್ ಅವರ ವಿವಾಹವು 2021ರ ಏಪ್ರಿಲ್ 3ರಂದು ಮುಸ್ಲಿಂ ಧಾರ್ಮಿಕ ವಿಧಿವಿಧಾನಗಳಂತೆ ನಡೆದಿತ್ತು. ಮದುವೆಯ ಸಂದರ್ಭದಲ್ಲಿ ಪತಿಯ ಬೇಡಿಕೆಯಂತೆ ಸಂತ್ರಸ್ತೆಯ ಪೋಷಕರು 5,00,000 ರೂ. ನಗದು ಹಾಗೂ 10 ತೊಲ ಬಂಗಾರವನ್ನು ವರದಕ್ಷಿಣೆಯಾಗಿ ನೀಡಿದ್ದರು ಎನ್ನಲಾಗಿದೆ.​ಆದರೆ, ಮದುವೆಯಾದ ಆರಂಭದ ದಿನಗಳಿಂದಲೇ ಪತಿ ಮುಬಾರಕ್ ಸಯ್ಯದ್, ಅತ್ತೆ ಶಕೀನಾ ಸೈಯದ್, ಮಾವ ಸೈಯದ್ ಫಿರ್ ಕಾಸಿಂ ಸಾಬ್ (ಅಬ್ಬಾಸ್), ಮೈದುನ ಮೊಸಿನ್ ಸೈಯದ್ ಹಾಗೂ ಹನೀಫ್ ಬುಡನ್ ಸಾಬ್ ಸಣ್ಣಪುಟ್ಟ ವಿಚಾರಗಳಿಗೂ ಕಿರುಕುಳ ನೀಡಲು ಆರಂಭಿಸಿದ್ದರು. ಹಲವು ಪ್ರಕರಣದ ಆರೋಪಿ ಮೊಸಿನ್ ಸೈಯದ್ ಹಾಗೂ ಕುಟುಂಬಸ್ಥರು ಸಂತ್ರಸ್ತೆಯನ್ನು ತವರು ಮನೆಗೆ ಹೋಗದಂತೆ ನಿರ್ಬಂಧಿಸಿ, ಮನೆಯ ಕೆಲಸದ ನೆಪದಲ್ಲಿ ನಿರಂತರ ಹಿಂಸೆ ನೀಡುತ್ತಿದ್ದರು. ಈ ದೌರ್ಜನ್ಯ ತಾಳಲಾರದೆ ಸಂತ್ರಸ್ತೆ 2024ರ ಅಕ್ಟೋಬರ್‌ನಲ್ಲಿ ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ತಿಳಿದುಬಂದಿದೆ.​

ಕತ್ತಿ-ಚಾಕುವಿನಿಂದ ಭೀಕರ ಹಲ್ಲೆ: ​ಏಪ್ರಿಲ್ 3, 2026ರಂದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಸಂತ್ರಸ್ತೆ ತನ್ನ ಮಕ್ಕಳನ್ನು ಕೊಡಿಸುವಂತೆ ಕೇಳಿದಾಗ ಆಕ್ರೋಶಗೊಂಡ ಆರೋಪಿಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಕ್ರಮವಾಗಿ ಮನೆಗೆ ನುಗ್ಗಿದ್ದಾರೆ. ಕತ್ತಿ ಮತ್ತು ಚಾಕುಗಳಂತಹ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪಿಗಳು, ಕೊಲೆ ಮಾಡುವ ಉದ್ದೇಶದಿಂದ ಶಾಝೀನ್ ಅವರ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ.​ಸದ್ಯ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಸಂತ್ರಸ್ತೆ, ತನ್ನ ಹಿತೈಷಿಗಳ ನೆರವಿನೊಂದಿಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಘಟನೆಯ ಗಾಂಭೀರ್ಯವನ್ನು ಪರಿಗಣಿಸಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.