ಡೈಲಿವಾರ್ತೆ: 01/ಮೇ/2026

ಮದವೇರಿದ ಆನೆಯ ಅಟ್ಟಹಾಸ: ಓರ್ವ ಸಾವು, ಮಾವುತ ಗಂಭೀರ!

ತಿರುವನಂತಪುರಂ, ಮೇ 1: ಎರ್ನಾಕುಳಂ ಜಿಲ್ಲೆಯ ಅಂಕಮಾಲಿ ಸಮೀಪದ ಕಿದಂಗೂರ್ ಮಹಾವಿಷ್ಣು ದೇವಸ್ಥಾನದ ಆವರಣದಲ್ಲಿ ಮದವೇರಿದ ಆನೆಯ ಅಟ್ಟಹಾಸದಿಂದ ಒಬ್ಬರು ಸಾವನ್ನಪ್ಪಿ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

‘ಮಯ್ಯನಾಡ್ ಪಾರ್ಥಸಾರಥಿ’ ಹೆಸರಿನ ಆನೆಯನ್ನು ಸಮೀಪದ ದೇವಸ್ಥಾನಗಳ ಉತ್ಸವದಲ್ಲಿ ಭಾಗವಹಿಸಲು ಕರೆತರಲಾಗಿತ್ತು. ಇಂದು ಬೆಳಿಗ್ಗೆ ಸುಮಾರು 9:30ರ ವೇಳೆಗೆ ಆನೆಯನ್ನು ಸ್ನಾನಗೊಳಿಸಲು ದೇವಸ್ಥಾನಕ್ಕೆ ಕರೆತಂದಾಗ, ಅದು ಏಕಾಏಕಿ ಮದವೇರಿದ ಸ್ಥಿತಿಗೆ ತಲುಗಿ ನಿಯಂತ್ರಣ ತಪ್ಪಿ ಅಟ್ಟಹಾಸ ಮೆರೆದಿದೆ.

ಈ ವೇಳೆ ಆನೆಯನ್ನು ಲಾರಿಯಲ್ಲಿ ಕರೆತಂದಿದ್ದ ಕೊಲ್ಲಂ ಮೂಲದ ಚಾಲಕ ವಿಷ್ಣು ಅವರು ಆನೆಯನ್ನು ಶಾಂತಗೊಳಿಸಲು ಮುಂದಾದಾಗ, ಆನೆ ಅವರ ಮೇಲೆ ದಾಳಿ ನಡೆಸಿ ತುಳಿದು ಹಾಕಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಎರಡನೇ ಮಾವುತ ಪ್ರದೀಪ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಅಂಕಮಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆನೆಯ ಅಟ್ಟಹಾಸದಿಂದ ದೇವಸ್ಥಾನದ ಆವರಣ ರಣರಂಗವಾಗಿ ಮಾರ್ಪಟ್ಟಿದ್ದು, ಅಲ್ಲಿ ನಿಲ್ಲಿಸಿದ್ದ ಕಾರುಗಳು ಹಾಗೂ ದ್ವಿಚಕ್ರ ವಾಹನಗಳು ಸಂಪೂರ್ಣ ಹಾನಿಗೊಳಗಾಗಿವೆ. ಆಕಸ್ಮಿಕ ದಾಳಿಯಿಂದ ಭಕ್ತರು ಮತ್ತು ಸ್ಥಳೀಯರು ಭೀತಿಗೊಳಗಾಗಿ ಚದುರಾಡಿ ಓಡಿಹೋಗಿದ್ದು, ಕೆಲಕಾಲ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ತ್ವರಿತ ಪ್ರತಿಕ್ರಿಯಾ ತಂಡ ಮತ್ತು ಪಶುವೈದ್ಯರು ಸುಮಾರು ಮೂರು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿದರು. ಕೊನೆಗೆ ಮಧ್ಯಾಹ್ನ 12:30ರ ಸುಮಾರಿಗೆ ಆನೆಗೆ ಅರಿವಳಿಕೆ ಮದ್ದು ನೀಡುವ ಮೂಲಕ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು.
ಈ ದುರಂತ ಘಟನೆ ದೇವಸ್ಥಾನಗಳಲ್ಲಿ ಆನೆಗಳ ಬಳಕೆಯ ಸುರಕ್ಷತಾ ಕ್ರಮಗಳ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಅಧಿಕಾರಿಗಳು ಘಟನೆ ಕುರಿತು ತನಿಖೆ ಆರಂಭಿಸಿದ್ದು, ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.