ಡೈಲಿವಾರ್ತೆ: 01/ಮೇ/2026

ನಿಧಿ ಆಸೆಗಾಗಿ ಹೆತ್ತ ತಾಯಿಯನ್ನೇ ಬಲಿ ಕೊಡಲು ಮುಂದಾದ ಪಾಪಿ ಪುತ್ರ: ಮಾಟಗಾರ ಪರಾರಿ, ಆರೋಪಿ ಪುತ್ರನ ಬಂಧನ ​

ಚಾಮರಾಜನಗರ: ಜಿಲ್ಲೆಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ಜರುಗಿದೆ. ನಿಧಿ ಸಿಗುತ್ತದೆ ಎಂಬ ಮೂಢನಂಬಿಕೆಗೆ ಒಳಗಾದ ಪಾಪಿ ಮಗನೊಬ್ಬ, ಹಡೆದ ತಾಯಿಯನ್ನೇ ಬಲಿ ಕೊಡಲು ಮುಂದಾದ ಅಮಾನವೀಯ ಘಟನೆ ಚಾಮರಾಜನಗರ ತಾಲೂಕಿನ ಸಾಗಡೆ ಗ್ರಾಮದಲ್ಲಿ ನಡೆದಿದೆ.​

ಘಟನೆಯ ವಿವರ: ಇಂದು (ಮೇ 1) ಹುಣ್ಣಿಮೆಯ ವಿಶೇಷ ದಿನವಾಗಿದ್ದರಿಂದ, ಈ ದಿನದಂದು ಬಲಿ ನೀಡಿದರೆ ಗುಪ್ತನಿಧಿ ಹಸ್ತಗತವಾಗುತ್ತದೆ ಎಂಬ ದುರಾಸೆಗೆ ಕೊಂಡಯ್ಯನ ಮಾದಶೆಟ್ಟಿ ಎಂಬಾತ ಬಿದ್ದಿದ್ದ. ಇದಕ್ಕಾಗಿ ಆತ ಆರಿಸಿಕೊಂಡಿದ್ದು ತನ್ನದೇ ಹೆತ್ತ ತಾಯಿ ಮಾದಮ್ಮಶೆಟ್ಟಿ (80) ಅವರನ್ನು. ವಯೋಸಹಜವಾಗಿ ಕಣ್ಣು ಕಾಣದ ಮತ್ತು ಕಿವಿ ಕೇಳದ ಸ್ಥಿತಿಯಲ್ಲಿದ್ದ ಅಸಹಾಯಕ ವೃದ್ಧೆಯನ್ನು ಹತ್ಯೆ ಮಾಡಲು ಈತ ಮಾಸ್ಟರ್ ಪ್ಲಾನ್ ರೂಪಿಸಿದ್ದ.​

ಮನೆಯಲ್ಲೇ ಸಿದ್ಧವಾಗಿತ್ತು ಮಸಣದ ಹಾದಿ: ಆರೋಪಿ ಮಾದಶೆಟ್ಟಿ ಇಂದು ಬೆಳಿಗ್ಗೆ ತನ್ನ ಮನೆಯೊಳಗೆ ರಹಸ್ಯವಾಗಿ ಸುಮಾರು 4 ಅಡಿ ಆಳದ ಗುಂಡಿಯನ್ನು ತೋಡಿದ್ದ. ಅಲ್ಲಿ ಮಾಟ-ಮಂತ್ರದ ವಿಧಿವಿಧಾನಗಳನ್ನು ನಡೆಸಲು ಮಡಕೆ, ಲಿಂಬೆಹಣ್ಣು, ಅರಿಶಿನ-ಕುಂಕುಮ ಹಾಗೂ ಕಳಸವನ್ನಿಟ್ಟು ಪೂಜೆ ಸಲ್ಲಿಸುತ್ತಿದ್ದ. ತಾಯಿಯನ್ನು ಬಲಿ ಕೊಡಲು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದ ಎನ್ನಲಾಗಿದೆ. ಮಾದಶೆಟ್ಟಿಯ ವಿಚಿತ್ರ ವರ್ತನೆ ಹಾಗೂ ಮನೆಯಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆ ಅಕ್ಕಪಕ್ಕದ ನಿವಾಸಿಗಳಿಗೆ ತೀವ್ರ ಅನುಮಾನ ಮೂಡಿತ್ತು. ತಕ್ಷಣವೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಚಾಮರಾಜನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರ ಆಗಮನದ ಸುಳಿವು ಸಿಗುತ್ತಿದ್ದಂತೆ ಘಟನಾ ಸ್ಥಳದಲ್ಲಿದ್ದ ಮಾಟಗಾರ ಪರಾರಿಯಾಗಿದ್ದು, ಆರೋಪಿ ಪುತ್ರ ಮಾದಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿಧಿಗಾಗಿ ಸ್ವಂತ ತಾಯಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ ವಿಚಾರ ತಿಳಿಯುತ್ತಿದ್ದಂತೆ ಸಾಗಡೆ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ಸದ್ಯ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಮಾಟಗಾರನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.