ಡೈಲಿವಾರ್ತೆ: 02/ಮೇ/2026

ಜ್ಞಾನದೊಂದಿಗೆ ಶಿಸ್ತು-ಸಂಸ್ಕಾರ ಮೇಳೈಸಿದಾಗ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣ: ಪಿ.ಜಿ.ಆರ್. ಸಿಂಧ್ಯಾ

​ಕುಂದಾಪುರ: ಕೇವಲ ಅಂಕ ಗಳಿಕೆಯಷ್ಟೇ ಶಿಕ್ಷಣವಲ್ಲ, ಜ್ಞಾನದೊಂದಿಗೆ ಶಿಸ್ತು ಮತ್ತು ಸಂಸ್ಕಾರ ಮೇಳೈಸಿದಾಗ ಮಾತ್ರ ಒಬ್ಬ ವಿದ್ಯಾರ್ಥಿ ಪರಿಪೂರ್ಣ ಮಾನವನಾಗಿ ರೂಪುಗೊಳ್ಳಲು ಸಾಧ್ಯ ಎಂದು ಕರ್ನಾಟಕ ರಾಜ್ಯದ ಮಾಜಿ ಸಚಿವ ಹಾಗೂ ಹಿರಿಯ ಮುತ್ಸದ್ದಿ ಶ್ರೀ ಪಿ.ಜಿ.ಆರ್. ಸಿಂಧ್ಯಾ ಅವರು ಅಭಿಪ್ರಾಯಪಟ್ಟರು.

​ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿಯಲ್ಲಿರುವ ‘ಸುಜ್ಞಾನ ಎಜುಕೇಶನಲ್ ಟ್ರಸ್ಟ್’ ಆಯೋಜಿಸಿದ್ದ ಏಳು ದಿನಗಳ ‘ಮಂಥನ’ ಬೇಸಿಗೆ ಶಿಬಿರದ ಸಮಾರೋಪ ಹಾಗೂ ‘ಬೂಟ್ ಕ್ಯಾಂಪ್’ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿದ ಅವರು ಸುಜ್ಞಾನ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ಕಾರ್ಯವೈಖರಿಯನ್ನು ಶ್ಲಾಘಿಸಿದ ಮಾತನಾಡಿ ಮನುಷ್ಯನ ನಿರ್ಮಾಣಕ್ಕೆ ಬೇಕಾದ ಜ್ಞಾನವನ್ನು ನೀಡುವ ಈ ಸಂಸ್ಥೆಯ ಹೆಸರು ಅತ್ಯಂತ ಅರ್ಥಪೂರ್ಣವಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಇಂತಹ ಸಾಹಸಮಯ ಶಿಬಿರಗಳನ್ನು ಆಯೋಜಿಸುತ್ತಿರುವುದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಶ್ಲಾಘನೀಯ.
ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಮೂಲಕ ನಾವು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಲು ಶ್ರಮಿಸುತ್ತಿದ್ದೇವೆ ಎಂದರು.

​ಜ್ಞಾನದಾನವೇ ಶ್ರೇಷ್ಠ ದಾನ:

ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯ ಬಗ್ಗೆ ಮಾತನಾಡಿದ ಅವರು, ಜ್ಞಾನವನ್ನು ಗಳಿಸುವುದು ಒಂದು ಕಡೆಯಾದರೆ ಅದನ್ನು ದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯ. ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ, ಅದೊಂದು ಸೇವೆಯ ಭಾವ. ಮಕ್ಕಳೊಂದಿಗೆ ಬೆರೆತಾಗ ಸಿಗುವ ಆನಂದ ಬೇರೆಲ್ಲಿಯೂ ಸಿಗದು. ಬದಲಾಗುತ್ತಿರುವ ಶಿಕ್ಷಣ ಕ್ರಮಕ್ಕೆ ತಕ್ಕಂತೆ ಶಿಕ್ಷಕರು ಅಪ್‌ಡೇಟ್ ಆಗುವ ಮೂಲಕ ವಿದ್ಯಾರ್ಥಿಗಳಿಗೆ ಮಹಾದಾನಿಗಳಾಗಬೇಕು ಎಂದು ಕರೆ ನೀಡಿದರು.

​ಯೋಗ ಮತ್ತು ಏಕಾಗ್ರತೆ ವಿದ್ಯಾರ್ಥಿಗಳಿಗೆ ಕಿವಿಮಾತು:

​ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚಿಸಲು ‘ಗಣೇಶಾಸನ’ದಂತಹ ಯೋಗಾಭ್ಯಾಸಗಳ ಮಹತ್ವವನ್ನು ತಿಳಿಸಿದ ಅವರು, “ಯೋಗಾಭ್ಯಾಸವು ಮೆದುಳನ್ನು ಚುರುಕುಗೊಳಿಸಿ ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಗಣಿತದಂತಹ ಕಠಿಣ ವಿಷಯಗಳನ್ನೂ ಸುಲಭವಾಗಿ ಅರ್ಥಮಾಡಿಕೊಳ್ಳಲು ಯೋಗ ಸಹಕಾರಿ. ಪ್ರತಿನಿತ್ಯ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

​ಸಂಸ್ಕಾರಯುತ ಬದುಕು:

ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುವುದು ನಮ್ಮ ಭಾರತೀಯ ಸಂಸ್ಕೃತಿಯ ತಳಹದಿ. ಹೆತ್ತ ತಾಯಿ, ತಂದೆ ಹಾಗೂ ಗುರುಗಳಿಗೆ ಗೌರವ ನೀಡುವ ಸಂಸ್ಕಾರವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಸಮಾಜ ಮತ್ತು ಪರಿಸರದ ಮೇಲಿನ ಪ್ರೀತಿ ಮಕ್ಕಳಲ್ಲಿ ಮೌಲ್ಯಗಳನ್ನು ಗಟ್ಟಿಗೊಳಿಸುತ್ತದೆ ಎಂದು ಅವರು ತಿಳಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ವಹಿಸಿದ್ದರು.

ವೇದಿಕೆಯಲ್ಲಿ ನಿರ್ದೇಶಕರು ಹಾಗೂ ಸಹಕಾರಿ ಧುರೀಣರಾದ ಚಂದ್ರಶೇಖರ್ ಶೆಟ್ಟಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಆನಂದ್ ಅಡಿಗ, ಪೇಪರ್ ಆರ್ಟ್ ಸ್ಪೆಷಲಿಸ್ಟ್ ಎಸ್.ಎಫ್. ಹುಸೇನಿ, ಹಿನ್ನೆಲೆ ಗಾಯಕ ಶ್ರೀ ಹರ್ಷ, ಹಾಗೂ ಸುಜ್ಞಾನ ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು.

​ಸಂಸ್ಥೆಯ ಕೋಶಾಧಿಕಾರಿ ಭರತ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು.

ಸಂಸ್ಕೃತ ಉಪನ್ಯಾಸಕಿ ಸುದಕ್ಷಿಣಾ ಆರ್. ಉಡುಪ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಿಕ್ಷಕ ವೃಂದ ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.