



ಡೈಲಿವಾರ್ತೆ: 02/ಮೇ/2026

ಶೃಂಗೇರಿ ಕ್ಷೇತ್ರದಲ್ಲಿ ಅಂಚೆ ಮತ ಮರು ಎಣಿಕೆ: ಟಿ.ಡಿ. ರಾಜೇಗೌಡಗೆ 203 ಮತಗಳ ಅಂತರದ ದೃಢ ಜಯ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಇಂದು ಅಂತ್ಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ತಮ್ಮ ಜಯವನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.

ಮರು ಎಣಿಕೆಯ ಬಳಿಕ ಅವರ ಮುನ್ನಡೆ ಹೆಚ್ಚಾಗಿ ಅಂತಿಮವಾಗಿ 203 ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ಸ್ಪಷ್ಟವಾಗಿದೆ.
ಈ ಹಿಂದೆ ನಡೆದ ಸಾಮಾನ್ಯ ಮತ ಎಣಿಕೆಯಲ್ಲಿ ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಆದರೆ ಅಂಚೆ ಮತಗಳ ಎಣಿಕೆಯಲ್ಲಿ ವ್ಯತ್ಯಾಸವಿದೆ ಎಂಬ ಆಕ್ಷೇಪಣೆ ಹಿನ್ನೆಲೆಯಲ್ಲಿ ಹೈಕೋರ್ಟ್ ನಿರ್ದೇಶನದಂತೆ ಮರು ಎಣಿಕೆ ಕೈಗೊಳ್ಳಲಾಯಿತು. ಇಂದಿನ ಮರು ಎಣಿಕೆಯಲ್ಲಿ ಅವರ ಮುನ್ನಡೆ 201ರಿಂದ 203ಕ್ಕೆ ಏರಿಕೆಯಾಗಿ, ಜಯ ಇನ್ನಷ್ಟು ದೃಢವಾಗಿದೆ.
ಇದೇ ವೇಳೆ, ಎಣಿಕೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ವಿವಾದಕ್ಕೂ ಕಾರಣವಾಯಿತು. ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಮತಗಳಿದ್ದ ಬಾಕ್ಸ್‌ನ ಸೀಲ್ ಮುಂಚಿತವಾಗಿ ತೆರೆಯಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತು. ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪ್ರತಿನಿಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಸ್ಥಿತಿಗತಿಯನ್ನು ಸಮಾಧಾನಗೊಳಿಸಲು ಚುನಾವಣಾಧಿಕಾರಿಗಳು ಈ ವಿಚಾರವನ್ನು ಹೈಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದ ನಂತರ ಮಾತ್ರ ಎಣಿಕೆ ಪ್ರಕ್ರಿಯೆ ಮುಂದುವರಿಯಿತು. ಭದ್ರತಾ ವ್ಯವಸ್ಥೆಗಳ ಮಧ್ಯೆ ನಡೆದ ಮರು ಎಣಿಕೆ ಪ್ರಕ್ರಿಯೆ ಅಂತಿಮವಾಗಿ ರಾಜೇಗೌಡ ಅವರ ಜಯವನ್ನು ಮತ್ತೊಮ್ಮೆ ದೃಢಪಡಿಸಿದೆ.