



ಡೈಲಿವಾರ್ತೆ: 03/ಮೇ/2026

ವಾಣಿಜ್ಯ ಎಲ್‌ಪಿಜಿ ಬೆಲೆ ಏರಿಕೆ: ಹೋಟೆಲ್ ಉದ್ಯಮ ಸ್ತಬ್ಧವಾಗುವ ಭೀತಿ – ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಬೆಂಗಳೂರು: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘದ (KSHA) ನೇತೃತ್ವದಲ್ಲಿ ಹೋಟೆಲ್ ಮಾಲೀಕರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಬೆಲೆ ಏರಿಕೆಯ ಬಿಸಿಯಿಂದಾಗಿ ಆತಿಥ್ಯ ವಲಯವು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಹಸ್ತಕ್ಷೇಪ ಮಾಡದಿದ್ದರೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಜಿಎಸ್‌ಟಿ ಕಡಿತಕ್ಕೆ ಆಗ್ರಹ: ಪ್ರಸ್ತುತ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಮೇಲೆ ವಿಧಿಸಲಾಗುತ್ತಿರುವ ಶೇ. 18ರಷ್ಟು ಜಿಎಸ್‌ಟಿಯನ್ನು ಶೇ. 5ಕ್ಕೆ ಇಳಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಕೇವಲ ಶೇ. 5ರಷ್ಟು ತೆರಿಗೆ ಇರುವಾಗ, ವಾಣಿಜ್ಯ ಬಳಕೆಗೆ ಇಷ್ಟೊಂದು ಹೆಚ್ಚಿನ ತೆರಿಗೆ ವಿಧಿಸುವುದು ಅವೈಜ್ಞಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಎರಡು ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಒಟ್ಟು 1,300 ರೂ.ಗಳಿಗೂ ಹೆಚ್ಚು ಏರಿಕೆಯಾಗಿದೆ. ಮಾರ್ಚ್ ತಿಂಗಳಲ್ಲಿ ಸುಮಾರು 2,000 ರೂ. ಆಸುಪಾಸಿನಲ್ಲಿದ್ದ ಸಿಲಿಂಡರ್ ಬೆಲೆ ಈಗ 3,100 ರೂ.ಗಳ ಗಡಿ ದಾಟಿದೆ. ಶುಕ್ರವಾರ ಒಂದೇ ದಿನ ದಾಖಲೆ ಎಂಬಂತೆ 993 ರೂ. ಏರಿಕೆ ಕಂಡಿರುವುದು ಉದ್ಯಮಿಗಳ ನಿದ್ದೆಗೆಡಿಸಿದೆ. ಪಶ್ಚಿಮ ಏಷ್ಯಾದ ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕ ಇಂಧನ ಬೆಲೆ ಏರುತ್ತಿರುವುದು ಈ ಪರಿಸ್ಥಿತಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರು, ಹೆಚ್ಚುತ್ತಿರುವ ವೆಚ್ಚವನ್ನು ಭರಿಸಲು ಸಾಧ್ಯವಾಗದೆ ಸಣ್ಣ ಮತ್ತು ಮಧ್ಯಮ ಗಾತ್ರದ ಹೋಟೆಲ್‌ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಸರ್ಕಾರ ಜಿಎಸ್‌ಟಿ ಕಡಿತಗೊಳಿಸಿ ನಮಗೆ ನೆರವಾಗದಿದ್ದರೆ, ಗ್ರಾಹಕರ ಮೇಲೆ ಈ ಹೊರೆಯನ್ನು ವರ್ಗಾಯಿಸುವುದು ಅನಿವಾರ್ಯವಾಗುತ್ತದೆ. ಇದು ನೇರವಾಗಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಉದ್ಯಮವನ್ನು ಉಳಿಸಿಕೊಳ್ಳಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನ್ವಯದೊಂದಿಗೆ ತಕ್ಷಣವೇ ತೆರಿಗೆ ಕಡಿತಗೊಳಿಸಿ ಹಣದುಬ್ಬರದ ಹೊಡೆತದಿಂದ ಆತಿಥ್ಯ ವಲಯವನ್ನು ರಕ್ಷಿಸಬೇಕೆಂದು ಅವರು ಮನವಿ ಮಾಡಿದ್ದಾರೆ.