



ಡೈಲಿವಾರ್ತೆ: 03/ಮೇ/2026

ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆಯಲ್ಲಿ ಟ್ವಿಸ್ಟ್: ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ 55 ಮತಗಳ ಗೆಲುವು!

ಚಿಕ್ಕಮಗಳೂರು:ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯು ನಾಟಕೀಯ ತಿರುವುಗಳೊಂದಿಗೆ ಅಂತ್ಯಗೊಂಡಿದೆ. ಮಾನ್ಯ ಹೈಕೋರ್ಟ್‌ನ ಆದೇಶದಂತೆ ನಡೆದ ಈ ಮರು ಪರಿಶೀಲನೆಯಲ್ಲಿ, ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು 55 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ರಾಜಕೀಯ ಸಮರದಲ್ಲಿ ಮೇಲುಗೈ ಸಾಧಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು 201 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ, ಈ ಫಲಿತಾಂಶವನ್ನು ಪ್ರಶ್ನಿಸಿ ಡಿ.ಎನ್. ಜೀವರಾಜ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಂದು ಚಲಾವಣೆಯಾಗಿದ್ದ ಒಟ್ಟು 1,811 ಅಂಚೆ ಮತಗಳಲ್ಲಿ 279 ಮತಗಳನ್ನು ಅಕ್ರಮವಾಗಿ ತಿರಸ್ಕರಿಸಲಾಗಿದೆ ಎಂಬುದು ಜೀವರಾಜ್ ಅವರ ಪ್ರಮುಖ ವಾದವಾಗಿತ್ತು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಹೈಕೋರ್ಟ್, ಏಪ್ರಿಲ್ 6ರಂದು ತಿರಸ್ಕೃತ ಮತಗಳ ಮರು ಪರಿಶೀಲನೆ ಹಾಗೂ ಎಲ್ಲಾ ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿತ್ತು.
ಮರು ಎಣಿಕೆಯ ಟ್ವಿಸ್ಟ್: ನ್ಯಾಯಾಲಯ ನೀಡಿದ್ದ ಆಕ್ಷೇಪಣಾ ಅವಧಿಯು ಏಪ್ರಿಲ್ 20ಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ಮರು ಎಣಿಕೆ ಪ್ರಕ್ರಿಯೆ ಕೈಗೊಂಡಿದ್ದರು. ಆರಂಭದಲ್ಲಿ ಟಿ.ಡಿ. ರಾಜೇಗೌಡ ಅವರೇ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ, ಅಂತಿಮವಾಗಿ 279 ಅಂಚೆ ಮತಗಳ ಮರು ಪರಿಶೀಲನೆಯ ನಂತರ ಅಂಕಿ-ಅಂಶಗಳು ಅದಲುಬದಲಾಗಿದ್ದು, ಡಿ.ಎನ್. ಜೀವರಾಜ್ ಅವರು 55 ಮತಗಳ ಮುನ್ನಡೆ ಸಾಧಿಸುವ ಮೂಲಕ ವಿಜಯಶಾಲಿಯಾಗಿದ್ದಾರೆ ಎಂದು ವರದಿಯಾಗಿದೆ.
ತಿರುವು ನೀಡಿದ ಅಂಚೆ ಮತಗಳು: ಸಾಮಾನ್ಯವಾಗಿ ಅಂಚೆ ಮತಗಳು ಚುನಾವಣಾ ಫಲಿತಾಂಶದ ಮೇಲೆ ಅಲ್ಪ ಪ್ರಭಾವ ಬೀರುತ್ತವೆ. ಆದರೆ ಶೃಂಗೇರಿಯಲ್ಲಿ ಇದೇ ಅಂಚೆ ಮತಗಳು ಇಡೀ ಕ್ಷೇತ್ರದ ಫಲಿತಾಂಶವನ್ನೇ ಬುಡಮೇಲು ಮಾಡಿರುವುದು ವಿಶೇಷ. ಈ ಮರು ಎಣಿಕೆಯ ಫಲಿತಾಂಶವು ಚುನಾವಣಾ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ ಮತ್ತು ಅಂಚೆ ಮತಗಳ ನಿರ್ವಹಣೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.ಈಗಾಗಲೇ ಚುನಾವಣಾಧಿಕಾರಿಗಳು ಈ ಪ್ರಕ್ರಿಯೆಯ ವರದಿಯನ್ನು ಸಿದ್ಧಪಡಿಸಿದ್ದು, ಮುಂದಿನ ಹಂತದಲ್ಲಿ ಹೈಕೋರ್ಟ್ ಮತ್ತು ಚುನಾವಣಾ ಆಯೋಗವು ಈ ನೂತನ ಫಲಿತಾಂಶದ ಬಗ್ಗೆ ಅಧಿಕೃತ ಮೊಹರು ಒತ್ತಲಿವೆ.