



ಡೈಲಿವಾರ್ತೆ: 03/ಮೇ/2026

ನವದೆಹಲಿ ಭೀಕರ ಅಗ್ನಿ ದುರಂತ: ಎಸಿ ಸ್ಫೋಟಕ್ಕೆ 9 ಮಂದಿ ಬಲಿ – ಒಂದೇ ಕುಟುಂಬದ ಐವರು ಸಾವು

ನವದೆಹಲಿ: ರಾಷ್ಟ್ರ ರಾಜಧಾನಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ರವಿವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದೂವರೆ ವರ್ಷದ ಹಸುಗೂಸು ಸೇರಿದಂತೆ ಒಟ್ಟು ಒಂಬತ್ತು ಮಂದಿ ಸಜೀವ ದಹನವಾಗಿರುವ ಹತಭಾಗ್ಯ ಘಟನೆ ನಡೆದಿದೆ.
ವಸತಿ ಸಂಕೀರ್ಣವೊಂದರಲ್ಲಿ ಸಂಭವಿಸಿದ ಈ ದುರಂತ ಇಡೀ ಪ್ರದೇಶವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ದುರಂತದ ವಿವರ:
ಮೇ 3ರ ರವಿವಾರ ಮುಂಜಾನೆ ಸುಮಾರು 4 ಗಂಟೆಯ ಹೊತ್ತಿಗೆ ನಾಲ್ಕು ಅಂತಸ್ತಿನ ವಸತಿ ಸಂಕೀರ್ಣದ ಎರಡನೇ ಅಂತಸ್ತಿನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಏರ್ ಕಂಡಿಷನರ್ (ಎಸಿ) ಸ್ಫೋಟಗೊಂಡಿದ್ದೇ ಈ ಭೀಕರ ಅಗ್ನಿ ದುರಂತಕ್ಕೆ ಪ್ರಾಥಮಿಕ ಕಾರಣ ಎಂದು ಶಂಕಿಸಲಾಗಿದೆ. ಬೆಂಕಿಯ ಜ್ವಾಲೆ ಕ್ಷಣಾರ್ಧದಲ್ಲಿ ಮೂರು ಮತ್ತು ನಾಲ್ಕನೇ ಅಂತಸ್ತಿಗೆ ವ್ಯಾಪಿಸಿದ್ದು, ಗಾಢ ನಿದ್ರೆಯಲ್ಲಿದ್ದ ನಿವಾಸಿಗಳು ಹೊರಬರಲಾಗದೆ ಬೆಂಕಿಯ ಕೆನ್ನಾಲಗೆಗೆ ಸಿಲುಕಿದ್ದಾರೆ.
ಬಲಿಯಾದವರ ವಿವರ:
ಮೃತಪಟ್ಟ ಒಂಬತ್ತು ಜನರ ಗುರುತು ಪತ್ತೆಯಾಗಿದ್ದು, ಎರಡನೇ ಅಂತಸ್ತಿನಲ್ಲಿ ವಾಸವಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವುದು ಅತ್ಯಂತ ಕರುಣಾಜನಕವಾಗಿದೆ.
ಒಂದೇ ಕುಟುಂಬದ ಐವರು: ಅರವಿಂದ್ ಜೈನ್ (60), ಪತ್ನಿ ಅನಿತಾ ಜೈನ್ (58), ಪುತ್ರ ನಿಶಾಂತ್ (35), ಸೊಸೆ ಆಂಚಲ್ (33) ಮತ್ತು ಒಂದೂವರೆ ವರ್ಷದ ಪುಟ್ಟ ಮಗು ಆಕಾಶ್.
ಮೂರನೇ ಅಂತಸ್ತಿನ ನಿವಾಸಿಗಳು: ನಿತಿನ್ ಜೈನ್ (50), ಪತ್ನಿ ಶೈಲಿ (48) ಮತ್ತು ಮಗ ಸಮ್ಯಕ್ (25).
ಮೊದಲ ಅಂತಸ್ತು: ಶಿಖಾ ಜೈನ್ (40) ಮೃತಪಟ್ಟಿದ್ದು, ಅವರ ಪತಿ ನವೀನ್ ಜೈನ್ ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ 14 ವಾಹನಗಳು ಧಾವಿಸಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದವು. ಈ ವೇಳೆ ಕಟ್ಟಡದಲ್ಲಿದ್ದ 12ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಟ್ಟಡದ ಮೇಲ್ಬಾಗದಿಂದ ದಟ್ಟವಾದ ಹೊಗೆ ಮತ್ತು ಬೆಂಕಿಯ ಕೆನ್ನಾಲಗೆಗಳು ಬರುತ್ತಿದ್ದ ದೃಶ್ಯ ಎದೆಝಲ್ಲೆನಿಸುವಂತಿತ್ತು. ಪ್ರಾಣ ಉಳಿಸಿಕೊಳ್ಳಲು ಜನರು ನಡೆಸುತ್ತಿದ್ದ ಚೀರಾಟ ಮನಕಲಕುವಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.
ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್ ಅಥವಾ ಎಸಿ ಸ್ಫೋಟದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.