



ಡೈಲಿವಾರ್ತೆ: 04/ಮೇ/2026

ಬಾರ್ಕೂರಿನ ಪಾರಂಪರಿಕ ಸೊಬಗು ಮರುಕಳಿಸಲು ಸಜ್ಜು; ಮೇ 6ಕ್ಕೆ ಸಚಿವ ಹೆಚ್.ಕೆ. ಪಾಟೀಲ್ ಭೇಟಿ

ಬ್ರಹ್ಮಾವರ: ಐತಿಹಾಸಿಕ ನಗರಿ ಬಾರ್ಕೂರಿನ ಪಾರಂಪರಿಕ ವಿನ್ಯಾಸವನ್ನು ಸಂರಕ್ಷಿಸಿ, ಪ್ರವಾಸೋದ್ಯಮವನ್ನು ಜಾಗತಿಕ ಭೂಪಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆಯನ್ನು ರೂಪಿಸಲಾಗಿದೆ. ಈ ಕುರಿತು ಸ್ಥಳ ಪರಿಶೀಲನೆ ನಡೆಸಲು ರಾಜ್ಯ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಮೇ 6ರಂದು ಬೆಳಿಗ್ಗೆ 10:00 ಗಂಟೆಗೆ ಬಾರ್ಕೂರಿಗೆ ಭೇಟಿ ನೀಡಲಿದ್ದಾರೆ ಎಂದು ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಸುಗ್ಗಿ ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.

ಮೇ 4ರಂದು ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಯೋಜನೆಯ ರೂಪರೇಷೆಗಳ ಕುರಿತು ಮಾಹಿತಿ ಹಂಚಿಕೊಂಡರು.
ಮೂಲ ಸ್ವರೂಪಕ್ಕೆ ಧಕ್ಕೆಯಿಲ್ಲದ ಜೀರ್ಣೋದ್ಧಾರ
ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಪುರಾತನ ದೇವಸ್ಥಾನಗಳ ಮೂಲ ಶೈಲಿಯನ್ನು ಬದಲಾಯಿಸುವ ಪ್ರವೃತ್ತಿ ಕಂಡುಬರುತ್ತಿದೆ. ಆದರೆ, ಬಾರ್ಕೂರಿನಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ‘ಹೆರಿಟೇಜ್ ಸ್ಟ್ರಕ್ಚರ್’ಗೆ ಯಾವುದೇ ಧಕ್ಕೆಯಾಗದಂತೆ ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ. ವಿಶೇಷವಾಗಿ ಪಂಚಲಿಂಗೇಶ್ವರ ದೇವಸ್ಥಾನದ ಹಳೆಯ ಕಾಲದ ಕಲ್ಲಿನ ಕೆತ್ತನೆ ಮತ್ತು ಶಿಲ್ಪಕಲೆಯನ್ನು ಹಾಗೆಯೇ ಉಳಿಸಿಕೊಂಡು ಪುನಶ್ಚೇತನಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಟೂರಿಸಂ ಪ್ಯಾರಡೈಸ್ ಆಗಲಿರುವ ಬಾರ್ಕೂರು:
ಒಂದು ಕಾಲದಲ್ಲಿ ರಾಜರ ಆಳ್ವಿಕೆಯ ಕೇಂದ್ರವಾಗಿದ್ದ ಬಾರ್ಕೂರಿನಲ್ಲಿ 365 ದೇವಸ್ಥಾನಗಳು ಹಾಗೂ 12 ಕೆರೆಗಳಿವೆ. ಈ ಐತಿಹಾಸಿಕ ಪರಂಪರೆಯನ್ನು ಬಳಸಿಕೊಂಡು ಪ್ರವಾಸೋದ್ಯಮವನ್ನು ವೃದ್ಧಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಈಗಾಗಲೇ ಅದ್ಭುತವಾದ ನೀಲನಕ್ಷೆಯನ್ನು (Sketch) ಸಿದ್ಧಪಡಿಸಿದ್ದಾರೆ. ಸಚಿವರ ಭೇಟಿಯ ವೇಳೆ ಕೋಟೆ ಹಾಗೂ ಕೆರೆಗಳ ಅಭಿವೃದ್ಧಿ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.
ಯೋಜನೆಗಳು ಅರ್ಧಕ್ಕೆ ನಿಲ್ಲಲು ಅಧಿಕಾರಿಗಳ ವರ್ಗಾವಣೆಯೂ ಕಾರಣವಾಗುತ್ತದೆ. ಹೀಗಾಗಿ, ಸ್ಥಳೀಯ ಹಿತಾಸಕ್ತಿ ಮತ್ತು ಬದ್ಧತೆಯಿಂದ ಈ ಯೋಜನೆಯನ್ನು ಮುನ್ನಡೆಸಬೇಕಿದೆ. ಈ ಹಿಂದೆ ನಡೆದ ಬಾರ್ಕೂರು ಉತ್ಸವದ ಮಾದರಿಯಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಮತ್ತೆ ಸಂಘಟಿಸುವ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

ಗಜಪೃಷ್ಟಾಕಾರದಲ್ಲೇ ಪುನರ್ ನಿರ್ಮಾಣ
ವಸಂತ ಗಿಳಿಯಾರ್ ಮಾತನಾಡಿ ಪಂಚಲಿಂಗೇಶ್ವರ ದೇವರು ಬಾರಕೂರು ಸೀಮೆಯ ಪಟ್ಟದ ದೇವರಾಗಿದ್ದು, ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ದೇವಸ್ಥಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಗಜಪೃಷ್ಟಾಕಾರದಲ್ಲೇ ಪುನರ್ ನಿರ್ಮಾಣಗೊಳ್ಳಲಿದೆ ಎಂದರು.
ಬಾರಕೂರು ಏಕನಾಥೇಶ್ವರೀ ದೇವಸ್ಥಾನದ ಟ್ರಸ್ಟಿ ಹಾಗೂ ಉಪಾಧ್ಯಕ್ಷ ಬಿ. ಜನಾರ್ದನ ದೇವಾಡಿಗ ಮಾತನಾಡಿ, ಪಂಚಲಿಂಗೇಶ್ವರ ದೇವರು ಸಮಗ್ರ ತುಳುನಾಡಿನ ಸೀಮೆ ದೇವರಾಗಿದ್ದು, ಈ ಜೀರ್ಣೋದ್ಧಾರ ಕಾರ್ಯದಲ್ಲಿ ತುಳುನಾಡಿನ ಸಮಸ್ತ ಭಕ್ತಾದಿಗಳು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಸುದೇಶ್ ಶೆಟ್ಟಿ, ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಶೆಟ್ಟಿ ಹಾಗೂ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಶ್ರೀನಿವಾಸ ಶೆಟ್ಟಿ ಉಪಸ್ಥಿತರಿದ್ದರು.