



ಡೈಲಿವಾರ್ತೆ: 05/ಮೇ/2026

ಶೃಂಗೇರಿ ಅಂಚೆ ಮತಗಳ ಅಕ್ರಮ ಆರೋಪ: ಶಾಸಕ ಡಿ.ಎನ್. ಜೀವರಾಜ್ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಅಂಚೆ ಮತಗಳ ಎಣಿಕೆಯಲ್ಲಿ ಗಂಭೀರ ಸ್ವರೂಪದ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಶಾಸಕ ಡಿ.ಎನ್. ಜೀವರಾಜ್ ಸೇರಿದಂತೆ ಮೂವರ ವಿರುದ್ಧ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಧಕ್ಕೆ ತಂದಿರುವ ಈ ಪ್ರಕರಣವು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಪ್ರಕರಣದ ಹಿನ್ನೆಲೆ:
ಅಂಚೆ ಮತ ಎಣಿಕೆ ಟೇಬಲ್‌ನ ಏಜೆಂಟ್ ಆಗಿದ್ದ ಸುಧೀರ್ ಕುಮಾರ್ ಮುರೋಳ್ಳಿ ಅವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಶಾಸಕ ಡಿ.ಎನ್. ಜೀವರಾಜ್, ಅಂದಿನ ಚುನಾವಣಾಧಿಕಾರಿ ವೇದಾಮೂರ್ತಿ ಹಾಗೂ ಅಂದಿನ ಜಿಲ್ಲಾಧಿಕಾರಿ ರಮೇಶ್ ಕುಮಾರ್ ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.
ದೂರಿನಲ್ಲಿರುವ ಗಂಭೀರ ಆರೋಪಗಳು:
ದೂರುದಾರರು ಸ್ಟ್ರಾಂಗ್ ರೂಂ ಮತ್ತು ಮತಪತ್ರಗಳ ಸುರಕ್ಷತೆಯ ಬಗ್ಗೆ ಹಲವು ಆತಂಕಕಾರಿ ಅಂಶಗಳನ್ನು ಉಲ್ಲೇಖಿಸಿದ್ದಾರೆ. ಮತಪತ್ರಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಂ ಸರಿಯಾಗಿ ಸೀಲ್ ಆಗಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.ಅಲ್ಲದೆ ಮತಪತ್ರಗಳಿದ್ದ ಟ್ರಂಕ್‌ಗಳ ಸೀಲ್ ಒಡೆದಿದ್ದು, ಲಾಕ್ ಕಟ್ ಮಾಡಲಾಗಿತ್ತು. ಇದು ಮತಗಳ ಟ್ಯಾಂಪರಿಂಗ್ ನಡೆದಿರುವ ಸಾಧ್ಯತೆಯನ್ನು ಬಲಪಡಿಸಿದೆ. ಮತಪತ್ರಗಳ ದುರ್ಬಳಕೆ ಹಾಗೂ ದಾಖಲೆಗಳ ತಿದ್ದುಪಡಿ ಮಾಡಿರುವ ಅನುಮಾನದ ಮೇಲೆ ವಂಚನೆ, ಕ್ರಿಮಿನಲ್ ಪಿತೂರಿ ಹಾಗೂ ಫೋರ್ಜರಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಚುನಾವಣಾ ವ್ಯವಸ್ಥೆಯ ಮೇಲೆ ಭರವಸೆ ಇಡಬೇಕಾದ ಅಧಿಕಾರಿಗಳೇ ಅಕ್ರಮಕ್ಕೆ ಸಾಥ್ ನೀಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಸೀಲ್ ಒಡೆದ ಟ್ರಂಕ್‌ಗಳು ಅಕ್ರಮಕ್ಕೆ ಸಾಕ್ಷಿಯಾಗಿವೆ ಎಂದು ದೂರುದಾರರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ನಗರ ಪೊಲೀಸರು ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಅಂದಿನ ಉನ್ನತ ಅಧಿಕಾರಿಗಳೇ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಇರುವುದರಿಂದ ತನಿಖೆಯು ತೀವ್ರ ಕುತೂಹಲ ಕೆರಳಿಸಿದೆ.