ಡೈಲಿವಾರ್ತೆ: 05/ಮೇ/2026

ಬೆಳ್ವೆ: ಜಾಗದ ತಕರಾರು ಹಿನ್ನೆಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ – ವ್ಯಕ್ತಿಗೆ ಗಂಭೀರ ಗಾಯ​

ಶಂಕರನಾರಾಯಣ: ಜಾಗದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಭೀಕರ ಘಟನೆ ಹೆಬ್ರಿ ತಾಲೂಕಿನ ಬೆಳ್ವೆ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ಬೆಳ್ವೆ ನಿವಾಸಿ ಮುರಳಿಧರ ಅಲ್ಸೆ (37) ಅವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.​

ಘಟನೆಯ ವಿವರ:​ ಮೇ 4ರಂದು ಮಧ್ಯಾಹ್ನ ಸುಮಾರು 3:30 ಗಂಟೆಗೆ ಮುರಳಿಧರ ಅಲ್ಸೆ ಅವರು ತಮ್ಮ ಜಾಗದ ಗಡಿಭಾಗದಲ್ಲಿ ಬೇಲಿ ಕಂಬವನ್ನು ಸರಿಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿ ಪ್ರಕಾಶ ಅಲ್ಸೆ ಈ ಜಾಗ ನನಗೇ ಸೇರಿದ್ದು, ಬೇಲಿ ಮುಟ್ಟಿದರೆ ನಿನ್ನನ್ನು ಕಡಿದು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.​ ಇದಕ್ಕೆ ಉತ್ತರಿಸಿದ ಮುರಳಿಧರ ಅವರು ಗಡಿ ಸಮಸ್ಯೆ ಇದ್ದರೆ ಸರ್ವೆ ಮಾಡಿಸೋಣ, ಅಲ್ಲಿಯವರೆಗೆ ಸುಮ್ಮನೆ ವಾದ ಮಾಡಬೇಡಿ ಎಂದು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಇದರಿಂದ ಕೆರಳಿದ ಆರೋಪಿ ಪ್ರಕಾಶ ಅಲ್ಸೆ, ತಾನು ತಂದಿದ್ದ ಕತ್ತಿಯಿಂದ ಮುರಳಿಧರ ಅವರ ಕುತ್ತಿಗೆಯ ಭಾಗಕ್ಕೆ ಗುರಿಯಾಗಿಸಿ ಬೀಸಿದ್ದಾನೆ.​

ಆರೋಪಿ ಕತ್ತಿ ಬೀಸಿದ ತಕ್ಷಣ ಮುರಳಿಧರ ಅವರು ರಕ್ಷಣೆಗಾಗಿ ತಮ್ಮ ಎಡಗೈಯನ್ನು ಅಡ್ಡ ಹಿಡಿದಿದ್ದಾರೆ. ಇದರಿಂದಾಗಿ ಅವರ ಎಡಗೈಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಅಲ್ಲಿಗೆ ಮುರಳಿಧರ ಅವರ ಪತ್ನಿ ವೈಶಾಲಿ ಅವರು ಧಾವಿಸಿ ಬರುತ್ತಿದ್ದಂತೆ, ಆರೋಪಿ ಪ್ರಕಾಶ ಅಲ್ಸೆ ಕತ್ತಿಯನ್ನು ಸ್ಥಳದಲ್ಲೇ ಎಸೆದು, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ.​

ಗಾಯಾಳುವನ್ನು ತಕ್ಷಣ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರದ ಸರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಅವರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.​ಈ ಭೀಕರ ಹಲ್ಲೆಯ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ವಿರುದ್ಧ BNS ಕಲಂ 109 (ಕೊಲೆ ಯತ್ನ), 352 ಹಾಗೂ 351(2) ಅಡಿಯಲ್ಲಿ ಅಪರಾಧ ಕ್ರಮಾಂಕ 30/2026 ರಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.