



ಡೈಲಿವಾರ್ತೆ: 05/ಮೇ/2026

ಸಚಿವ ಜಮೀರ್ ಅಹ್ಮದ್ ನಿವಾಸದಲ್ಲಿ ಕೋಟಿ ಮೌಲ್ಯದ ಚಿನ್ನಾಭರಣ ಕಳವು: ಆಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಿವಾಸದಲ್ಲಿ ಕಳೆದ ಮೂರು ವರ್ಷಗಳಿಂದ ಹಂತ ಹಂತವಾಗಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಇಬ್ಬರು ಕಿಡಿಗೇಡಿಗಳನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಅಮೀರ್ ಅಹ್ಮದ್ ಮತ್ತು ಅವೀನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸಚಿವರ ನಿವಾಸದಿಂದ ಒಟ್ಟು 1 ಕೆಜಿ 200 ಗ್ರಾಂ ಚಿನ್ನಾಭರಣಗಳನ್ನು ಎಗರಿಸಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಆರೋಪಿ ಅಮೀರ್ ಅಹ್ಮದ್ ಸಚಿವರಿಗೆ ನಿಕಟವರ್ತಿಯಾಗಿದ್ದು, ಜಮೀರ್ ಅಹ್ಮದ್ ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಪದೇ ಪದೇ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದನು. ಇದನ್ನೇ ಬಂಡವಾಳ ಮಾಡಿಕೊಂಡ ಈತ, 2023ರಿಂದ ಸಚಿವರ ಮನೆಯಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಹಂತ ಹಂತವಾಗಿ ಚಿನ್ನಾಭರಣಗಳನ್ನು ಕದಿಯುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿಗಳು ಕೃತ್ಯದ ಹಿಂದಿನ ಕಾರಣವನ್ನು ಒಪ್ಪಿಕೊಂಡಿದ್ದಾರೆ. ಅಮೀರ್ ಅಹ್ಮದ್ ನಡೆಸುತ್ತಿದ್ದ ಟ್ರಾವೆಲ್ಸ್ ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸಿದ್ದನು. ಈ ನಷ್ಟವನ್ನು ತುಂಬಿಕೊಳ್ಳಲು ಹಾಗೂ ಕದ್ದ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿ ದೊಡ್ಡ ಲಾಭ ಗಳಿಸುವ ಉದ್ದೇಶದಿಂದ ಈ ಕಳ್ಳತನ ಎಸಗಿರುವುದು ತಿಳಿದುಬಂದಿದೆ.
ಸಚಿವರ ಕುಟುಂಬಸ್ಥರು ಆರೋಪಿಗಳಿಗೆ ಕರೆ ಮಾಡಿದಾಗ ಅವರು ಸರಿಯಾಗಿ ಸ್ಪಂದಿಸದೆ, ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದರು. ಇದು ಇಬ್ಬರ ಮೇಲೆ ಸಂಶಯ ಮೂಡುವಂತೆ ಮಾಡಿತು. ಈ ನಡುವೆ ಚಿನ್ನಾಭರಣಗಳು ಕಾಣೆಯಾಗಿರುವುದು ಗಮನಕ್ಕೆ ಬಂದಾಗ ಸಚಿವ ಜಮೀರ್ ಅಹ್ಮದ್ ಅವರ ತಾಯಿ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಶಿವಾಜಿನಗರ ಪೊಲೀಸರು ತನಿಖೆ ಕೈಗೆತ್ತಿಕೊಂಡು, ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದು, ಕಳವು ಮಾಡಲಾದ ಚಿನ್ನಾಭರಣಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.