ಡೈಲಿವಾರ್ತೆ: 06/ಮೇ/2026

ಬಂಗಾಳದಲ್ಲಿ ಚುನಾವಣೋತ್ತರ ರಕ್ತಪಾತ: ಬಿಜೆಪಿ-ಟಿಎಂಸಿ ಕಾರ್ಯಕರ್ತರ ಹತ್ಯೆ, ರಾಜ್ಯಾದ್ಯಂತ ಹೈ ಅಲರ್ಟ್

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಮುಂದುವರಿದಿದ್ದು, ಮಂಗಳವಾರ ನಡೆದ ಭೀಕರ ಸಂಘರ್ಷದಲ್ಲಿ ಇಬ್ಬರು ರಾಜಕೀಯ ಕಾರ್ಯಕರ್ತರು ಬಲಿಯಾಗಿದ್ದಾರೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಪ್ರತಿಪಕ್ಷ ಬಿಜೆಪಿಯ ತಲಾ ಒಬ್ಬೊಬ್ಬ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ವರದಿಗಳ ಪ್ರಕಾರ, ಬಿರ್ಭೂಮ್ ಜಿಲ್ಲೆಯ ನನೂರ್ ಪ್ರದೇಶದಲ್ಲಿ ಮೊದಲು ಸಂಘರ್ಷ ಭುಗಿಲೆದ್ದಿದೆ. ಬಿಜೆಪಿ ಬೆಂಬಲಿಗರು ಟಿಎಂಸಿ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ವೇಳೆ ಟಿಎಂಸಿ ಕಾರ್ಯಕರ್ತ ಅಬೀರ್ ಶೇಖ್ ಎಂಬುವವರನ್ನು ಬರ್ಬರವಾಗಿ ಕಡಿದು ಹತ್ಯೆ ಮಾಡಲಾಗಿದೆ.
​ಈ ಘಟನೆಯ ಬೆನ್ನಲ್ಲೇ ಭಲ್ಲಿಗುರಿ ಎಂಬಲ್ಲಿ ಬಿಜೆಪಿ ಮೆರವಣಿಗೆ ಸಾಗುತ್ತಿದ್ದಾಗ ಉಂಟಾದ ವಾಗ್ವಾದ ವಿಕೋಪಕ್ಕೆ ತಿರುಗಿದೆ. ಈ ಘರ್ಷಣೆಯಲ್ಲಿ ತೀವ್ರವಾಗಿ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ಮಧು ಮಂಡಲ್ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.


​ಚುನಾವಣಾ ಆಯೋಗದ ಕಠಿಣ ಕ್ರಮ
​ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಹಿಂಸಾಚಾರದಲ್ಲಿ ಭಾಗಿಯಾಗಿರುವ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸುವಂತೆ ಆದೇಶಿಸಿದ್ದಾರೆ. ಪಕ್ಷಗಳ ಕಚೇರಿ ಧ್ವಂಸ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.


​ಯಾವುದೇ ಕಾರಣಕ್ಕೂ ಹಿಂಸಾಚಾರಕ್ಕೆ ಅವಕಾಶ ನೀಡಬಾರದು. ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರ ಗಸ್ತು ತಿರುಗುವ ಮೂಲಕ ಜನರಲ್ಲಿ ಭರವಸೆ ಮೂಡಿಸಬೇಕು ಮುಖ್ಯ ಚುನಾವಣಾ ಆಯುಕ್ತರ ನಿರ್ದೇಶನವಾಗಿದೆ.

​ಮುಖ್ಯ ಚುನಾವಣಾ ಆಯುಕ್ತರು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಕೋಲ್ಕತ್ತಾ ಪೊಲೀಸ್ ಆಯುಕ್ತರೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಸೇರಿದಂತೆ ಜಿಲ್ಲಾ ನ್ಯಾಯಾಧೀಶರು ಮತ್ತು ಎಸ್‌ಪಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಹಗಲಿರುಳು ಗಸ್ತು ತಿರುಗುವಂತೆ ಮತ್ತು ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
​ಪ್ರಸ್ತುತ ಅಹಿತಕರ ಘಟನೆ ನಡೆದ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.