ಡೈಲಿವಾರ್ತೆ: 06/ಮೇ/2026

ಬಾರ್ಕೂರಿನ ಐತಿಹಾಸಿಕ ವೈಭವ ಉಳಿಸಿ ಪುನರುಜ್ಜೀವನಗೊಳಿಸಬೇಕು: ಸಚಿವ ಹೆಚ್.ಕೆ. ಪಾಟೀಲ್

ಬ್ರಹ್ಮಾವರ, ಮೇ 06: ಐತಿಹಾಸಿಕ ಮಹತ್ವ ಹೊಂದಿರುವ ಬಾರ್ಕೂರಿನ ಕೋಟೆ-ಕೊತ್ತಲಗಳು, ಗುಡಿ-ಗೋಪುರಗಳು ಹಾಗೂ ಇತಿಹಾಸ ಸಾರುವ ಪ್ರಾಚೀನ ಆಸ್ತಿಗಳನ್ನು ಸಂರಕ್ಷಿಸಿ, ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ದುರಸ್ಥಿಗೊಳಿಸಿ ಪುನರುಜ್ಜೀವನಗೊಳಿಸುವ ಅಗತ್ಯವಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ಬ್ರಹ್ಮಾವರ ತಾಲೂಕಿನ ಬಾರ್ಕೂರಿನ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ಬಳಿಕ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಮ್ಮ ನಾಡಿನ ಗತವೈಭವ ಮತ್ತು ಇತಿಹಾಸ ಮರೆಯಾಗುತ್ತಿರುವುದು ವಿಷಾದನೀಯವಾಗಿದೆ. ಇತಿಹಾಸವನ್ನು ಸಾರುವ ಪ್ರತಿಯೊಂದು ಕಲ್ಲನ್ನೂ ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದ್ದು, ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಬಾರ್ಕೂರು ರಾಜ್ಯವನ್ನು ದೀರ್ಘಾವಧಿ ಆಳಿದ ಅಳುಪರ ಆಡಳಿತ ಜಾಗತಿಕ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಹೊಂದಿದೆ. ಶಾಂತಿಯುತ ಆಡಳಿತ ವ್ಯವಸ್ಥೆ ಮೂಲಕ ಜನರ ಹಿತ ಕಾಪಾಡಿದ ಆಳ್ವಿಕೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬಾರ್ಕೂರಿನ ಐತಿಹಾಸಿಕ ಶ್ರೀಮಂತಿಕೆಯನ್ನು ಮರುಸ್ಥಾಪಿಸಲು ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಅಧಿಕೃತ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದ ಸಚಿವರು, ಶೀಘ್ರದಲ್ಲೇ ಸಮಗ್ರ ಯೋಜನಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಮೂಲ ಸ್ವರೂಪಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಬಾರ್ಕೂರಿನ ವೈಭವವನ್ನು ಮತ್ತೆ ವಿಜೃಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಇದೇ ವೇಳೆ ಲಕ್ಕುಂಡಿ ಪ್ರದೇಶದಲ್ಲಿ ಪತ್ತೆಯಾದ ಸುಮಾರು 3500 ಪ್ರಾಚ್ಯಾವಶೇಷಗಳನ್ನು ಸಂಗ್ರಹಿಸಿ ಬಯಲು ಮ್ಯೂಸಿಯಂ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು. ಈಗಾಗಲೇ 35 ದೇವಸ್ಥಾನಗಳು ಮತ್ತು 35 ಬಾವಿಗಳನ್ನು ಗುರುತಿಸಿ ಸಂರಕ್ಷಣೆ ಹಾಗೂ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದ್ದು, ಇತಿಹಾಸದಲ್ಲಿ ಉಲ್ಲೇಖಗೊಂಡಿರುವ 101 ದೇವಸ್ಥಾನಗಳು ಹಾಗೂ 101 ಬಾವಿಗಳನ್ನು ಗುರುತಿಸಿ ಅನಾವರಣಗೊಳಿಸುವ ಕಾರ್ಯ ವರ್ಷಾವಧಿಯೊಳಗೆ ಪೂರ್ಣಗೊಳಿಸಲಾಗುವುದು ಎಂದರು.


ಉತ್ತರ ಕರ್ನಾಟಕದಿಂದ ಕರಾವಳಿ ಭಾಗದ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಶಿರಸಿ, ಕೊಲ್ಲೂರು, ಉಡುಪಿ, ಹೊರನಾಡು, ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯಗಳಿಗೆ ಮಹಿಳೆಯರು ಉಚಿತ ಧಾರ್ಮಿಕ ಪ್ರವಾಸ ಕೈಗೊಳ್ಳುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದ್ದು, ಭಕ್ತಿಭಾವ ವೃದ್ಧಿಗೆ ಇದು ನೆರವಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಗದೀಶ್ ಶೆಟ್ಟರ್, ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ನಾಯಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಹಿರಿಯರಾದ ಶಾಂತಾರಾಮ್ ಶೆಟ್ಟಿ, ಅಳುಪ ಮನೆತನದ ಆಕಾಶ್‌ರಾಜ್ ಜೈನ್, ಪ್ರವೀಣ್ ಆಚಾರ್ ರಂಗನಕೆರೆ, ವಸಂತ ಶೆಟ್ಟಿ ಗಿಳಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು