



ಡೈಲಿವಾರ್ತೆ: 07/ಮೇ/2026

ಮಣಿಪಾಲ: ನಿಯಮ ಮೀರಿ ಹೋಟೆಲ್ ಕಾರ್ಯಾಚರಣೆ – ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ಮಾಲೀಕನ ವಿರುದ್ಧ ಪ್ರಕರಣ ದಾಖಲು

ಮಣಿಪಾಲ: ಜಿಲ್ಲೆಯ ಪ್ರತಿಷ್ಠಿತ ವಿದ್ಯಾಕೇಂದ್ರವಾಗಿರುವ ಮಣಿಪಾಲದಲ್ಲಿ ತಡರಾತ್ರಿಯವರೆಗೆ ನಿಯಮ ಬಾಹಿರವಾಗಿ ಹೋಟೆಲ್ ನಡೆಸುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದ್ದ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ.
ಘಟನೆಯ ಹಿನ್ನೆಲೆ:
ದಿನಾಂಕ 05/05/2026 ರಂದು ಮಣಿಪಾಲ ಠಾಣಾ ಪೊಲೀಸ್ ಉಪನಿರೀಕ್ಷಕರಾದ ತಿಮ್ಮೇಶ್ ಬಿ. ಎನ್. ರವರು ರಾತ್ರಿ ಗಸ್ತಿನ (ರೌಂಡ್ಸ್) ಕರ್ತವ್ಯದಲ್ಲಿದ್ದಾಗ, ಮೇ 6ರ ಮುಂಜಾನೆ ಸುಮಾರು 0:27 ಗಂಟೆಯ ಸುಮಾರಿಗೆ ಶಿವಳ್ಳಿ ಗ್ರಾಮದ ವಿ. ಎಸ್. ಆಚಾರ್ಯ ರಸ್ತೆಯಲ್ಲಿರುವ ‘ರೂಸ್ಟರ್ ಹೋಟೇಲ್’ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯಾಚರಣೆ ನಡೆಸುತ್ತಿರುವುದು ಕಂಡುಬಂದಿದೆ.
ಸದರಿ ಹೋಟೆಲ್ ನಿಗದಿಗಿಂತ ಹೆಚ್ಚಿನ ಅವಧಿಯವರೆಗೆ ತೆರೆದಿದ್ದು, ಗ್ರಾಹಕರಿಗೆ ಪಾರ್ಸೆಲ್ ಸೇವೆ ನೀಡುತ್ತಿತ್ತು. ಇದರಿಂದಾಗಿ ಉಡುಪಿಯ ವಿವಿಧ ಭಾಗಗಳಿಂದ ಜನರು ಅಲ್ಲಿ ಜಮಾಯಿಸುತ್ತಿದ್ದು, ಆ ಪರಿಸರದಲ್ಲಿರುವ ಅಪಾರ್ಟ್‌ಮೆಂಟ್ ನಿವಾಸಿಗಳ ಶಾಂತಿ ಮತ್ತು ನೆಮ್ಮದಿಗೆ ತೀವ್ರ ಅಡ್ಡಿಯಾಗುತ್ತಿತ್ತು. ಈ ಕುರಿತು ಸಾರ್ವಜನಿಕರಿಂದ ಬಂದ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸ್ಥಳಕ್ಕೆ ಧಾವಿಸಿ ಹೋಟೆಲನ್ನು ಮುಚ್ಚಿಸಿದ್ದಾರೆ.
ಹೋಟೆಲ್ ಮಾಲೀಕರಿಗೆ ಈ ಹಿಂದೆ ಹಲವು ಬಾರಿ ಮೌಖಿಕವಾಗಿ ಎಚ್ಚರಿಕೆ ನೀಡಿ, ನಿಗದಿತ ಸಮಯಕ್ಕೆ ವ್ಯವಹಾರ ಸ್ಥಗಿತಗೊಳಿಸುವಂತೆ ಸೂಚಿಸಲಾಗಿತ್ತು. ಆದರೂ ಮಾಲೀಕರು ಯಾವುದೇ ಅಧಿಕೃತ ಪರವಾನಗಿ ಪಡೆಯದೆ, ಉದ್ದೇಶಪೂರ್ವಕವಾಗಿ ಅವಧಿ ಮೀರಿ ಹೋಟೆಲ್ ನಡೆಸುತ್ತಿದ್ದರು. ಈ ಮೂಲಕ ಸಾರ್ವಜನಿಕ ಉಪದ್ರವಕ್ಕೆ (Public Nuisance) ಕಾರಣರಾಗಿರುವುದು ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 76/2026, ಕಲಂ: 292 BNS (Bharatiya Nyaya Sanhita) ರಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.