ಡೈಲಿವಾರ್ತೆ: 07/ಮೇ/2026

ಕಾಮುಕರ ಬೆವರಿಳಿಸಿದ ಮಹಿಳಾ ಐಪಿಎಸ್ ಅಧಿಕಾರಿ: ‘ರೇಟ್ ಎಷ್ಟು?’ ಎಂದವರಿಗೆ ಸಿಕ್ಕಿತು ಮರೆಯಲಾಗದ ಶಾಕ್!​

ಹೈದರಾಬಾದ್: ನಗರದ ರಕ್ಷಕರು ಎಚ್ಚರ ತಪ್ಪಿದರೆ ಸಮಾಜದ ಕಂಟಕರು ಹೇಗೆ ಅಟ್ಟಹಾಸ ಮೆರೆಯುತ್ತಾರೆ ಎಂಬುದಕ್ಕೆ ಹೈದರಾಬಾದ್‌ನ ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಖುದ್ದು ಪೊಲೀಸ್ ಕಮಿಷನರ್ ಅವರೇ ಸಾಮಾನ್ಯ ಮಹಿಳೆಯ ಸೋಗಿನಲ್ಲಿ ಮಧ್ಯರಾತ್ರಿ ರಸ್ತೆಗಿಳಿದಾಗ ನಗರದ ಅಸಲಿ ಮುಖ ಬಯಲಾಗಿದೆ.​

ಸಾಹಸಮಯ ಕಾರ್ಯಾಚರಣೆ: ಕಮಿಷನರ್ ಸುಲತಿ ಅವರ ದಿಟ್ಟ ಹೆಜ್ಜೆ​ಮಲ್ಕಾಜ್‌ಗಿರಿ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಸುಲತಿ ಅವರು ನಗರದಲ್ಲಿ ಮಹಿಳೆಯರ ಸುರಕ್ಷತೆಯ ವಾಸ್ತವ ಸ್ಥಿತಿಯನ್ನು ತಿಳಿಯಲು ನಿರ್ಧರಿಸಿದರು. ಯಾವುದೇ ಭದ್ರತೆ ಇಲ್ಲದೆ, ಸಾಮಾನ್ಯ ಉಡುಪು ಧರಿಸಿದ ಅವರು ಮಧ್ಯರಾತ್ರಿ ದಿಲ್‌ಸುಖ್‌ ನಗರದ ಬಸ್ ನಿಲ್ದಾಣದಲ್ಲಿ ಒಬ್ಬಂಟಿಯಾಗಿ ನಿಂತಿದ್ದರು.​

ಬಸ್ ನಿಲ್ದಾಣದಲ್ಲಿ ಕಾಮುಕರ ದರ್ಬಾರ್: ‘ಬರ್ತೀಯಾ? ರೇಟ್ ಎಷ್ಟು?

ಕಮಿಷನರ್ ಅವರು ಬಸ್ ನಿಲ್ದಾಣದಲ್ಲಿ ನಿಂತ ಕೆಲವೇ ಕ್ಷಣಗಳಲ್ಲಿ ಸುಮಾರು 40ಕ್ಕೂ ಹೆಚ್ಚು ಕಿಡಿಗೇಡಿಗಳು ಅವರನ್ನು ಸುತ್ತುವರೆದಿದ್ದಾರೆ. ಮಹಿಳಾ ಅಧಿಕಾರಿಯ ಗುರುತು ತಿಳಿಯದ ಆ ಕಾಮುಕರು, ಅತ್ಯಂತ ಹೇಯವಾಗಿ ವರ್ತಿಸಿ “ನಿನ್ನ ರೇಟ್ ಎಷ್ಟು? ಬರ್ತೀಯಾ?” ಎಂದು ಅಸಭ್ಯವಾಗಿ ಪೀಡಿಸಿದ್ದಾರೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಈ ಕಿಡಿಗೇಡಿಗಳಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಾಗಿದ್ದು, ಮದ್ಯ ಹಾಗೂ ಗಾಂಜಾದ ಅಮಲಿನಲ್ಲಿದ್ದರು.

​ಬಯಲಾದ ಪೊಲೀಸ್ ಇಲಾಖೆಯ ಕರ್ತವ್ಯ ಲೋಪ:​ ಕಮಿಷನರ್ ಅವರು ಸುಮಾರು ಮೂರು ಗಂಟೆಗಳ ಕಾಲ ಆ ಅಪಾಯಕಾರಿ ಪರಿಸರದಲ್ಲಿದ್ದರೂ, ಒಂದೇ ಒಂದು ಪೆಟ್ರೋಲಿಂಗ್ ವಾಹನವಾಗಲಿ ಅಥವಾ ಗಸ್ತು ತಿರುಗುವ ಪೊಲೀಸರಾಗಲಿ ಆ ಭಾಗಕ್ಕೆ ಸುಳಿಯಲಿಲ್ಲ. ಇದು ನಗರದ ಭದ್ರತಾ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಸ್ವತಃ ಕಮಿಷನರ್ ಅವರೇ ಖುದ್ದಾಗಿ ಸಾಕ್ಷೀಕರಿಸುವಂತೆ ಮಾಡಿದೆ.​

ಸೆಲ್ಯೂಟ್ ಹೊಡೆದ ಎಸ್‌ಐ; ಬೆಚ್ಚಿಬಿದ್ದ ಕಾಮುಕರು!​

ಸುಮಾರು ಮೂರೂವರೆ ಗಂಟೆಗಳ ನಂತರ ಬೀಟ್ ಕಾನ್‌ಸ್ಟೇಬಲ್ ಮತ್ತು ಎಸ್‌ಐ ಸ್ಥಳಕ್ಕೆ ಆಗಮಿಸಿದಾಗ ಸತ್ಯ ಬಯಲಾಗಿದೆ. ಎಸ್‌ಐ ಅವರು ಕಮಿಷನರ್ ಅವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದಂತೆ, ಅಲ್ಲಿಯವರೆಗೆ ಅಸಭ್ಯವಾಗಿ ವರ್ತಿಸುತ್ತಿದ್ದ 40ಕ್ಕೂ ಹೆಚ್ಚು ಪೋಕರಿಗಳು ದಿಕ್ಕೆಟ್ಟು ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಎಲ್ಲರನ್ನೂ ವಶಕ್ಕೆ ಪಡೆದ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಬಂಧಿತರಿಗೆ ತೀವ್ರ ಸ್ವರೂಪದ ಕೌನ್ಸಿಲಿಂಗ್ ನೀಡಲಾಗಿದ್ದು, ಮಾದಕ ವ್ಯಸನದ ವಿರುದ್ಧ ಎಚ್ಚರಿಕೆ ನೀಡಲಾಗಿದೆ. ಇನ್ನು, ಮೂರು ಗಂಟೆಗಳ ಕಾಲ ಗಸ್ತು ತಿರುಗದೆ ಕರ್ತವ್ಯ ಲೋಪ ಎಸಗಿದ ಸ್ಥಳೀಯ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಕಮಿಷನರ್ ಆದೇಶಿಸಿದ್ದಾರೆ.