



ಡೈಲಿವಾರ್ತೆ: 07/ಮೇ/2026

ಕರೀಂನಗರದಲ್ಲಿ ಬಿಆರ್‌ಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ: ಶಾಸಕರ ಕಚೇರಿ ಧ್ವಂಸ

ಹೈದರಾಬಾದ್, ಮೇ 07: ಕೇಂದ್ರ ಸಚಿವ ಬಂಡಿ ಸಂಜಯ್ ಮತ್ತು ಬಿಆರ್‌ಎಸ್ ಶಾಸಕ ಪಾಡಿ ಕೌಶಿಕ್ ರೆಡ್ಡಿ ನಡುವಿನ ಮಾತಿನ ಸಮರ ಇದೀಗ ವಿಕೋಪಕ್ಕೆ ತಿರುಗಿದ್ದು, ಕರೀಂನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಸಕ ಕೌಶಿಕ್ ರೆಡ್ಡಿ ಅವರ ವಿವಾದಾತ್ಮಕ ಹೇಳಿಕೆಯಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು, ಮಾಜಿ ಸಚಿವ ಗಂಗುಲ ಕಮಲಾಕರ್ ಅವರ ಕ್ಯಾಂಪ್ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ.
ಘಟನೆಯ ಹಿನ್ನೆಲೆ: ಕೆರಳಿಸಿದ ಕೌಶಿಕ್ ರೆಡ್ಡಿ ಹೇಳಿಕೆ
ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ಡ್ರಗ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಇತ್ತೀಚೆಗೆ ಕೇಂದ್ರ ಸಚಿವ ಬಂಡಿ ಸಂಜಯ್ ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ಸವಾಲು ಎಸೆದಿದ್ದ ಕೌಶಿಕ್ ರೆಡ್ಡಿ ಬಂಡಿ ಸಂಜಯ್ ಅವರೇ ಮೊದಲು ಡ್ರಗ್ ಟೆಸ್ಟ್ ಮಾಡಿಸಿಕೊಳ್ಳಲಿ. ಮಾದಕ ವಸ್ತು ಮಿಶ್ರಿತ ತಂಬಾಕು ಸೇವನೆಯಿಂದಲೇ ಅವರ ಕೂದಲು ಉದುರಿದೆ ಎಂಬ ವೈಯಕ್ತಿಕ ಟೀಕೆ ಮಾಡಿದ್ದರು. ಈ ಹೇಳಿಕೆಯು ಬಿಜೆಪಿ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಕಚೇರಿ ಮೇಲೆ ದಾಳಿ – ರಣರಂಗವಾದ ಕರೀಂನಗರ: ಗುರುವಾರ ಕೌಶಿಕ್ ರೆಡ್ಡಿ ಅವರು ಕ್ಯಾಂಪ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ನೂರಾರು ಬಿಜೆಪಿ ಕಾರ್ಯಕರ್ತರು ಕಚೇರಿಗೆ ನುಗ್ಗಿದರು. ಕಚೇರಿಯ ಒಳಗಿದ್ದ ಪೀಠೋಪಕರಣಗಳು ಮತ್ತು ಬಾಗಿಲುಗಳನ್ನು ಪ್ರತಿಭಟನಾಕಾರರು ಪುಡಿಪುಡಿ ಮಾಡಿದ್ದಾರೆ. ಕಚೇರಿ ಮುಂಭಾಗ ನಿಲ್ಲಿಸಿದ್ದ ಕಾರುಗಳನ್ನು ಜಖಂಗೊಳಿಸಲಾಗಿದೆ.
ಪೊಲೀಸ್ ಲಾಠಿ ಪ್ರಹಾರ: ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು.
ಬಿಆರ್‌ಎಸ್ ತೀವ್ರ ಆಕ್ರೋಶ: ಇದು ಪ್ರಜಾಪ್ರಭುತ್ವದ ಕೊಲೆ
ಘಟನೆಯನ್ನು ಖಂಡಿಸಿ ಟ್ವೀಟ್ (X) ಮಾಡಿರುವ ಬಿಆರ್‌ಎಸ್ ಪಕ್ಷವು ಬಂಡಿ ಸಂಜಯ್ ವಿರುದ್ಧ ನೇರ ವಾಗ್ದಾಳಿ ನಡೆಸಿದೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವರಾದ ಬಂಡಿ ಸಂಜಯ್ ಅವರೇ ಸ್ವತಃ ದಾಳಿಗೆ ಸಂಚು ರೂಪಿಸಿರುವುದು ಅತ್ಯಂತ ಖಂಡನೀಯ. ಕೇಂದ್ರ ಸಚಿವರ ಸ್ಥಾನದಲ್ಲಿದ್ದುಕೊಂಡು ಗೂಂಡಾಗಿರಿ ನಡೆಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ಜನರು ಸರಿಯಾದ ಸಮಯದಲ್ಲಿ ಬಿಜೆಪಿ ಗೂಂಡಾಗಳಿಗೆ ಪಾಠ ಕಲಿಸಲಿದ್ದಾರೆ ಎಂದು ಬಿಆರ್‌ಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಸ್ಥಳದಲ್ಲಿ ಈಗಲೂ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಕೌಶಿಕ್ ರೆಡ್ಡಿ ಮತ್ತು ಬಿಜೆಪಿ ಮುಖಂಡರ ನಡುವಿನ ಈ ರಾಜಕೀಯ ಕಿತ್ತಾಟ ಈಗ ತೆಲಂಗಾಣ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.